ಮೈಸೂರು: 12 ಲಕ್ಷ ರೂ. ಪಡೆದು ವಾಪಸ್ ನೀಡದೇ ವಂಚಿಸಿದ್ದ ದಂಪತಿಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆಯೊಂದಿಗೆ 20 ಸಾವಿರ ರೂ. ದಂಡ ವಿಧಿಸಿ ನಗರದ ಒಂದನೇ ಅಧಿಕ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ.
ಬೆಂಗಳೂರು ಮೂಲದ ಮೈಸೂರಿನ ಹೆಬ್ಬಾಳಿನ ನಿವಾಸಿಗಳಾಗಿದ್ದ ವಾಸು ಮತ್ತು ತೇಜಾವತಿ ದಂಪತಿಯೇ ಶಿಕ್ಷೆಗೆ ಗುರಿಯಾದವರು.
ವಿಜಯನಗರದ ಆಶಾ ಅವರಿಂದ ಈ ದಂಪತಿ 12 ಲಕ್ಷ ರೂ. ಪಡೆದು ಭದ್ರತೆಗಾಗಿ 4 ಚೆಕ್ ನೀಡಿದ್ದರು. ಬಳಿಕ ಈ ಜೋಡಿ ಮನೆ ಮಾರಾಟ ಮಾಡಿ ತಲೆಮರೆಸಿಕೊಂಡಿತ್ತು.
ವಂಚನೆ ಕುರಿತು ಆಶಾ ಅವರು ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎ.ಜೆ.ರೂಪಾ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ತೀರ್ಪು ಪ್ರಕಟಿಸಿದ್ದು, ಶಿಕ್ಷೆಯೊಂದಿಗೆ 12 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡುವಂತೆಯೂ ಆದೇಶಿಸಿದ್ದಾರೆ. ಹಿರಿಯ ಸಹಾಯಕ ಅಭಿಯೋಜಕ ಕೆ.ಪ್ರಕಾಶ ವಾದಿಸಿದ್ದರು.