ನಗರದ ಶ್ರೀ ಛಾಯಾದೇವಿ ಬಿ.ಇಡಿ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜಾನಪದ ಹಾಗೂ ಬುಡಕಟ್ಟು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಶ್ರೀಕಾಂತ್, ಸಿ.ಅಂಥೋಣಿ ಪೌಲ್‌ರಾಜ್, ಕ್ಯಾತನಹಳ್ಳಿ ಪ್ರಕಾಶ್, ಕಾವೇರಿ ಪ್ರಕಾಶ್, ಶಿವಕುಮಾರ್, ಟಿ.ಎನ್.ರಾಜೇಶ್ವರಿ, ಅಂಶಿ ಪ್ರಸನ್ನಕುಮಾರ್ ಇದ್ದರು.
ಭಾರತೀಯರು ಬ್ರಿಟಿಷರೊಂದಿಗೆ ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದರು. ಆದರೆ ಇವತ್ತಿನ ಅರಣ್ಯ ಇಲಾಖೆಯವರು ಆದಿವಾಸಿಗಳೊಂದಿಗೆ ಬ್ರಿಟಿಷರ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಡೀಡ್ ಸಂಸ್ಥೆ ಸಂಸ್ಥಾಪಕ ಎಸ್.ಶ್ರೀಕಾಂತ್ ಟೀಕಿಸಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕವು ರಾಜೇಂದ್ರ ನಗರದ ಶ್ರೀ ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಜಾನಪದ ಹಾಗೂ ಬುಡಕಟ್ಟು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಆದಿವಾಸಿಗಳಿಗೆ ಯಾವ ಸೌಲಭ್ಯ ದೊರಕಬೇಕೋ ಅದನ್ನು ನೀಡಲು ಕೂಡ ಅರಣ್ಯಇಲಾಖೆಯವರು ಅಡ್ಡಿಯಾಗಿದ್ದಾರೆ. ಕಾಡಿನಿಂದ ಹೊರಗೆ ಹಾಕಲ್ಪಟ್ಟ ಎಲ್ಲರಿಗೂ ಪುನರ್ಸವತಿ ಸಿಕ್ಕಿಲ್ಲ. ಈ ಸಂಬಂಧ ಹೋರಾಟ ಮಾಡಿ, ಹೈಕೋರ್ಟ್ ಆದೇಶ
ನೀಡಿದ್ದರೂ ಯಾವುದೇ ಸೌಲಭ್ಯ ನೀಡಿದೆ ತೊಂದರೆ ಕೊಡುತ್ತಿದ್ದಾರೆ ಎಂದು ಅವರು ದೂರಿದರು.
ಶ್ರೀ ಛಾಯಾದೇವಿ ಶಿಕ್ಷಣ ಮಹಾವಿದ್ಯಾಯದ ಪ್ರಾಂಶುಪಾಲ ಸಿ.ಅಂಥೋಣಿ ಪೌಲ್‌ರಾಜ್ ಮಾತನಾಡಿ, ಭವಿಷ್ಯದಲ್ಲಿ ಶಿಕ್ಷಕರಾಗಿ ನಾಡಿನ ಸತ್ಪ್ರಜೆಗಳನ್ನು ತಯಾರು ಮಾಡುವ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಜಾನಪದ ಹಾಗೂ ಬುಡಕಟ್ಟು ಸಂಸ್ಕೃತಿಯನ್ನು ಪರಿಚಯಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದೆ ಕೂಡ ಜಾನಪದ ಹಾಗೂ ಬುಡಕಟ್ಟು ಕಾರ್ಯಕ್ರಮಗಳಿಗೆ ಸಕ್ರಿಯವಾಗಿ ಕೈಜೋಡಿಸುವುದಾಗಿ ಹೇಳಿದರು.
ಕಜಾಪ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಮಾತನಾಡಿ, ಪ್ರಸ್ತುತ ಮೊಬೈಲ್‌ನಿಂದಾಗಿ ಯುವಕರು ಜಾನಪದ ಕಲೆಗಳನ್ನು ಮರೆಯುತ್ತಿದ್ದಾರೆ. ಎಲ್ಲ ಸಾಹಿತ್ಯದಿಂದ ಮೂಲಬೇರು ಜಾನಪದ. ಅದು ತಾಯಿ ಬೇರು ಇದ್ದಂತೆ. ಅದೇ ಬುಡಕಟ್ಟು ಜನಾಂಗದವರು ಪೂರ್ವಿಕರ ಕಾಲದಿಂದಲೂ ಕಾಡಿನೊಂದಿಗೆ ನಂಟು ಹೊಂದಿರುವವರು. ಹೀಗಾಗಿ ಜಾನಪದ ಹಾಗೂ ಬುಡಕಟ್ಟು ಜನರನ್ನು ಮರೆಯಬಾರದು ಎಂದರು.
ಇದೇ ವೇಳೆ ಜಾನಪದ ಹಾಗೂ ಬುಡಕಟ್ಟು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಜಾಪ ವಿಭಾಗೀಯ ಸಂಚಾಲಕಿ ಕಾವೇರಿ ಪ್ರಕಾಶ್, ನಿವೃತ್ತ ಶಿಕ್ಷಣಾಧಿಕಾರಿ ಶಿವಕುಮಾರ್, ಕಜಾಪ ನರಸಿಂಹರಾಜ ಕ್ಷೇತ್ರದ ಅಧ್ಯಕ್ಷೆ ಟಿ.ಎನ್.ರಾಜೇಶ್ವರಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೋಹನ್ ಪಾಳೇಗಾರ್ ಇತರರಿದ್ದರು.