ಶಿವಪುತ್ರಪ್ಪ ಮ.ಬಡಿಗೇರ, ಚ.ಭೀ.ಸೋಮಶೆಟ್ಟಿ ಅವರಿಗೆ ದತ್ತಿ ಪ್ರಶಸ್ತಿ

ಶಿವಪುತ್ರಪ್ಪ ಮ.ಬಡಿಗೇರ, ಚ.ಭೀ.ಸೋಮಶೆಟ್ಟಿ
ಶಿವಪುತ್ರಪ್ಪ ಮ.ಬಡಿಗೇರ, ಚ.ಭೀ.ಸೋಮಶೆಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ನೀಡಲಾಗುವ ವಚನ ಚಿತ್ರ ರಚನಾ ಪಿತಾಮಹ ಎಂ.ವೀರಪ್ಪ ದತ್ತಿ ಪ್ರಶಸ್ತಿ
 ಪ್ರಶಸ್ತಿ ಪುರಸ್ಕೃತರಿಗೆ ತಲಾ 68,000 ರೂ., ಸ್ವಸ್ತಿವಾಚನ ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ.
ಕರಕುಶಲ ಕಲಾವಿದ ಶಿವಪುತ್ರಪ್ಪ ಹುಬ್ಬಳ್ಳಿಯ ಅಂಚಟಗೇರಿ ಗ್ರಾಮದವರು. ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ. ದೇವತೆಗಳು ಹಾಗೂ ಅಲಂಕಾರಿಕ ಮೂರ್ತಿಗಳ ತಯಾರಿಕೆ, ಮರದ ರಥಗಳ ನಿರ್ಮಾಣ ಹಾಗೂ ಕೆತ್ತನೆ ಕೆಲಸಗಳಿಗೆ ಹೆಸರಾದವರು. 
40 ವರ್ಷಕ್ಕೂ ಹೆಚ್ಚು ಕಾಲ ಮರದ ಕೆತ್ತನೆ ಕೆಲಸದಲ್ಲಿ ಅನುಭವವಿರುವವರು. ಮಣ್ಣು, ಪ್ಲಾಸ್ಟರ್‌ಗಳಲ್ಲೂ ಕಲಾಕೃತಿ ರಚಿಸಿದ್ದಾರೆ. ಇವರು ಮಾಡಿರುವಂತಹ ಮೂರ್ತಿಗಳು ಅನೇಕ ದೇವಸ್ಥಾನಗಳಲ್ಲಿ ಪೂಜೆಗೊಳ್ಳುತ್ತಿವೆ.
ಚಿತ್ರಕಲಾವಿದ ಚ.ಭೀ. ಸೋಮಶೆಟ್ಟಿಯವರು ತೆಲಂಗಾಣದ ಜಹಿರಾಬಾದ್‌ನಲ್ಲಿ ಜನಿಸಿದವರು. ಪ್ರಸ್ತುತ ಬೀದರ್‌ನಲ್ಲಿ ನೆಲೆಸಿದ್ದಾರೆ. ಚಿತ್ರಕಲಾ ಶಿಕ್ಷಕರಾಗಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿರುವರು. 
ಜಲವರ್ಣದಲ್ಲಿ 125 ಕಲಾಕೃತಿ ರಚಿಸಿದ್ದಾರೆ. ಹಲವಾರು ಪುಸ್ತಕಗಳಿಗೆ, ಮಾಸಪತ್ರಿಕೆಗಳಿಗೆ ಮುಖಪುಟ ಚಿತ್ರ ಬರೆದಿರುತ್ತಾರೆ.  ಶ್ರೀಗುರುಬಸವ ಚಿತ್ರಚರಿತ ಹಾಗೂ ಅಮರ ಗಣಂಗಳ ಕಾಯಕ ಚಿತ್ರ ದರ್ಶನ ಗ್ರಂಥಗಳ ಕಲಾವಿದರು. ಬಸವಾದಿ ಶರಣರ 200ಕ್ಕೂ ಹೆಚ್ಚು ರೇಖಾ ಚಿತ್ರ ರಚಿಸಿರುತ್ತಾರೆ. 
ಚಿತ್ರಕಲೆ ಹಾಗೂ ಕರಕುಶಲ ಕಲೆಗಳಲ್ಲಿ ಸಾಧನೆ ಮಾಡಿರುವ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಮೈಸೂರು ಟಾಯ್ಸ ಕಂಪನಿಯ ಸ್ಥಾಪಕರು ಹಾಗೂ ಚಿತ್ರಕಲಾವಿದರಾಗಿದ್ದ ಎಂ. ವೀರಪ್ಪ ಅವರ ಹೆಸರಿನಲ್ಲಿ ಅವರ ಪುತ್ರ ಪ್ರಫುಲ್ಲ ಚಂದ್ರ ಅವರು ಹಾಗೂ ಮೊಮ್ಮಕ್ಕಳಾದ ಸತೀಶ್ ಪ್ರಫುಲ್ಲ ಚಂದ್ರ ಅವರು ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ದತ್ತಿ ಸ್ಥಾಪಿಸಿದ್ದಾರೆ.
 ಅದರ ಆಶ್ರಯದಲ್ಲಿ 2015ರಿಂದಲೂ ಶ್ರೇಷ್ಠ ಕಲಾವಿದರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮುಂದೆ ಏರ್ಪಡಿಸುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಗುವುದು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net