ಆರಂಭಿಕ ರೋಗನಿರ್ಣಯ ಚಿಕಿತ್ಸೆಗಿಂತ ಉತ್ತಮ

ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಹಿಮೋಫಿಲಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಜೆ ಸೌಮ್ಯಾ, ಡಾ.ಸಿ.ಪಿ.ಮಧು, ಡಾ.ಎಂ.ಡಿ.ರವಿ,  ಡಾ.ಎಂ.ಆಶಾ,  ಡಾ.ಪಿ. ಪಲ್ಲವಿ ಇತರರು ಇದ್ದರು.
ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಹಿಮೋಫಿಲಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಜೆ ಸೌಮ್ಯಾ, ಡಾ.ಸಿ.ಪಿ.ಮಧು, ಡಾ.ಎಂ.ಡಿ.ರವಿ, ಡಾ.ಎಂ.ಆಶಾ, ಡಾ.ಪಿ. ಪಲ್ಲವಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೀಡಿಯಾಟ್ರಿಕ್ ಆಂಕಾಲಾಜಿಸ್ಟ್ ಡಾ.ಜೆ ಸೌಮ್ಯಾ ಅಭಿಪ್ರಾಯ
  • ವಿಶ್ವ ಹಿಮೋಫಿಲಿಯಾ ದಿನಾಚರಣೆ ಕಾರ್ಯಕ್ರಮ
ಮೈಸೂರು: ಆರಂಭಿಕ ರೋಗನಿರ್ಣಯವು ಚಿಕಿತ್ಸೆಗಿಂತ ಉತ್ತಮ ಎಂದು ಭಾರತ್ ಆಸ್ಪತ್ರೆ ಮತ್ತು ಆಂಕಾಲಾಜಿ ಸಂಸ್ಥೆಯ ಪೀಡಿಯಾಟ್ರಿಕ್ ಆಂಕಾಲಾಜಿಸ್ಟ್ ಡಾ.ಜೆ ಸೌಮ್ಯಾ ಹೇಳಿದರು
ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ಹಿಮೋಫಿಲಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವ ಹಿಮೋಫಿಲಿಯಾ ದಿನವನ್ನು ಪ್ರತಿ ವರ್ಷ ಏ.17ರಂದು ಆಚರಿಸಲಾಗುತ್ತದೆ. ಹಿಮೋಫಿಲಿಯಾ ಒಂದು ರಕ್ತದ ಕಾಯಿಲೆಯಾಗಿದೆ. ಇದು ರಕ್ತ ಹೆಪ್ಪುಗಟ್ಟದಂತೆ ಮಾಡುವ ಅಪರೂಪದ ಅನುವಂಶಿಕ ಕಾಯಿಲೆಯಾಗಿದ್ದು, ಇದರಿಂದ ರಕ್ತಹೆಪ್ಪುಗಟ್ಟದ ಸಣ್ಣ ಗಾಯಗಳಿಗೂ ದೀರ್ಘಕಾಲದವರೆಗೆ ರಕ್ತಸ್ರಾವವಾಗುತ್ತದೆ. 
ಮಾಂಸಖಂಡಗಳಲ್ಲಿ ರಕ್ತಸೋರುವಿಕೆ, ಬಿಳಿಮಚ್ಚೆ, ಸಂಧಿವಾತ ಈ ಲಕ್ಷಣಗಳಿಗೆ ಆರಂಭದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಮುಂದೆ ಆಗುವ ತೊಡಕು ತಡೆಗಟ್ಟಬಹುದು ಎಂದರು.
ಹಿಮೋಫಿಲಿಯಾ ಕಾಯಿಲೆಯು ಇತ್ತೀಚಿನ ಕಾಯಿಲೆಯಲ್ಲ. ಇದು ಬಹಳ ಹಳೇ ಕಾಯಿಲೆಯಾಗಿದ್ದು, ಜನರಲ್ಲಿ ಇದರ ಬಗ್ಗೆ ಅರಿವು ಮತ್ತು ಜಾಗೃತಿಯ ಕೊರತೆಯಿಂದ ಪ್ರಾರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿರಲಿಲ್ಲ.
ಈಗ ತಂತ್ರಜ್ಞಾನ ಮತ್ತು ಹಲಾವಾರು ಸಂಶೋಧನೆಗಳಿಂದ ಹಿಮೋಫಿಲಿಯಾ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ಚಿಕಿತ್ಸೆಯು ಕೂಡ ಲಭ್ಯವಿದೆ ಎಂದು ತಿಳಿಸಿದರು.
ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು ಮಾತನಾಡಿ, ಹಿಮೋಫಿಲಿಯಾವನ್ನು ‘ರಾಯಲ್ ಡಿಸೀಸ್’ ಎಂದು ಕರೆಯುತ್ತಾರೆ. 19 ಮತ್ತು 20ನೇ ಶತಮಾನದಲ್ಲಿ ಯುರೋಪಿಯನ್ ರಾಜಮನೆತನಗಳಲ್ಲಿ ವಿಶೇಷವಾಗಿ ವಿಕ್ಟೋರಿಯಾ ರಾಣಿಯ ವಂಶಸ್ಥರಲ್ಲಿ ಈ ಅನುವಂಶಿಕ ರಕ್ತಸ್ರಾವದ ಅಸ್ವಸ್ಥತೆ ಹೆಚ್ಚಾಗಿ ಕಂಡುಬಂದಿತ್ತು. ಇದರಿಂದಾಗಿ ಇದನ್ನು ಈ ಹೆಸರಿನಿಂದ ಕರೆಯುತ್ತಾರೆ ಎಂದು ತಿಳಿಸಿದರು. 
ಹಿಮೋಫಿಲಿಯಾ ಕಾಯಿಲೆ ಬಂದರೆ ನನ್ನ ಜೀವನವೇ ಮುಗಿಯಿತು ಎಂದುಕೊಳ್ಳಬಾರದು. ಈ ಕಾಯಿಲೆ ಲಕ್ಷಣಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಸಾಮಾನ್ಯರಂತೆ ಜೀವನ ನಡೆಸಬಹುದು. 
ಆರೋಗ್ಯ ಕ್ಷೇತ್ರದ ಸಂಶೋಧನೆಗಳಿಂದ ಈ ಕಾಯಿಲೆಗೆ ಚಿಕಿತ್ಸೆ ಮತ್ತು ಔಷಧಗಳು ಲಭ್ಯವಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಧೈರ್ಯ ಕಳೆದುಕೊಳ್ಳದೆ ಚಿಕಿತ್ಸೆ ಪಡೆದು ಎಲ್ಲರಂತೆ ಜೀವನ ನಡೆಸಬಹುದು ಎಂದರು. 
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಿಡಿಎಸ್‌ಎ ಕೇಂದ್ರದ ಮುಖ್ಯ ಸಂಯೋಜಕ ಡಾ.ಎಂ.ಡಿ.ರವಿ, ರೋಗಲಕ್ಷಣ ಶಾಸ್ತ್ರ ಪ್ರಯೋಗಾಲಯದ ಮುಖ್ಯಸ್ಥೆ ಡಾ.ಎಂ.ಆಶಾ, ರಕ್ತ ಕೇಂದ್ರ ವಿಭಾಗದ ಅಧಿಕಾರಿ ಡಾ.ಪಿ.ಪಲ್ಲವಿ, ಮೈಸೂರಿನ ಹಿಮೋಫಿಲಿಯಾ ಸೊಸೈಟಿಯ ಕಾರ್ಯದರ್ಶಿ ಪ್ರವೀಣ್ ಮತ್ತು ಆಸ್ಪತ್ರೆಯ ವೈದ್ಯರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net