ಕಲಾವಿದರಿಗೆ ಅನುದಾನ ನೀಡಲು ತಾರತಮ್ಯ

ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೊ.ಜಯಪ್ರಕಾಶ ಗೌಡ ಉದ್ಘಾಟಿಸಿದರು.  ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಮಂಡ್ಯ ರಮೇಶ್, ನಿರ್ಮಲಾ ಮಠಪತಿ, ಎಚ್.ಎಸ್. ಸುರೇಶ್ ಬಾಬು, ರಾಜಶೇಖರ ಕದಂಬ, ಕೃಪಾ ಪಡ್ಕೆ, ದೀಪಕ್ ಮೈಸೂರು ಇದ್ದರು.
ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರೊ.ಜಯಪ್ರಕಾಶ ಗೌಡ ಉದ್ಘಾಟಿಸಿದರು. ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಮಂಡ್ಯ ರಮೇಶ್, ನಿರ್ಮಲಾ ಮಠಪತಿ, ಎಚ್.ಎಸ್. ಸುರೇಶ್ ಬಾಬು, ರಾಜಶೇಖರ ಕದಂಬ, ಕೃಪಾ ಪಡ್ಕೆ, ದೀಪಕ್ ಮೈಸೂರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ವಿರುದ್ಧ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ ಗೌಡ ಆಕ್ರೋಶ
  • ಮೈಸೂರು ವಲಯ ಸಾಂಸ್ಕೃತಿಕ ಸಂಘಟಕರ ಸಮಾವೇಶ
ಕಲಾವಿದರಿಗೆ ಅನುದಾನ ನೀಡುವಲ್ಲಿಯೂ ಸರ್ಕಾರ ತಾರತಮ್ಯ ಮಾಡುತ್ತಿದೆ. ಯಾರು ಕೆಲಸ ಮಾಡುತ್ತಾರೋ ಅವರಿಗೆ ಕೊಡದೆ ಮತ್ಯಾರಿಗೋ ಲಕ್ಷಾಂತರ ರೂ. ಕೊಟ್ಟರೆ, ಕೆಲಸ ಮಾಡುವವರಿಗೆ 30-40 ಸಾವಿರ ರೂ. ನೀಡುತ್ತಾರೆ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ ಗೌಡ ಕಿಡಿಕಾರಿದರು.
ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಕರ್ನಾಟಕ ರಂಗ ಪರಿಷತ್, ಕೇಂದ್ರ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ವಲಯ ಸಾಂಸ್ಕೃತಿಕ ಸಂಘಟಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಅನುದಾನವನ್ನು ಯೊಗ್ಯತೆ ಅನುಸಾರ ನೀಡಲಿ. ಕಲಾವಿದರು, ಲೇಖಕರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುವುದು ಸಂಘಟಕರ ಕೆಲಸ. ಆದರೆ ಆತನನ್ನು ದುಡ್ಡಿಗಾಗಿ ಬಂದಿದ್ದಾನೆ ಎಂಬಂತೆ ನೋಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬೇರೆಯವರ ಮುಂದೆ ತಗ್ಗಿ ಬಗ್ಗಿ ಭಿಕ್ಷೆ ಬೇಡಿ ಲೇಖಕರು, ಕಲಾವಿದರನ್ನು ಸಾಕುವ, ಅವರ ಪಲ್ಲಕ್ಕಿ ಹೊರುವ ಅಗತ್ಯವಿಲ್ಲ. ಸಂಘಟಕರೆಲ್ಲರೂ ಬಲಿಷ್ಠರಾಗದ ಹೊರತು ಯಾರೂ ಮನ್ನಣೆ ನೀಡುವುದಿಲ್ಲ. ಅಧಿಕಾರಿಗಳು ಯಾವಾಗಲೂ ಸರ್ಕಾರದ ಪರ ಇರುತ್ತಾರೆ. ನಿಮ್ಮನ್ನು ನೀವು ಸಂಘಟಿಸದೆ, ಸಂತೈಷಿಕೊಳ್ಳದಿದ್ದರೆ ಏನು ಪ್ರಯೋಜನ? ಇಂತಹ ಸಮಾವೇಶ ಮಾಡುವುದರಿಂದ ಏನು ಉಪಯೋಗ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ, ಮಂತ್ರಿಗಳ ವಿರುದ್ಧ ಮಾತನಾಡಿದರೆ ಮುಂದಿನ ಸಭೆಗೆ ಕರೆಯಬೇಡಿ ಎನ್ನುತ್ತಾರೆ ಎಂದರು.
ಸಂಘಟಕರಲ್ಲಿ ಮೊದಲು ದಿಟ್ಟ ನಿಲುವು ಬರಬೇಕು. ಲೇಖಕರು, ನಟರು ಪ್ರಚಾರ ಸಿಗುತ್ತದೆ. ಸಂಘಟಕರ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಗೌರವವೂ ಇಲ್ಲ, ಸಂಘಟಕರಿಗಾಗಿ ಯಾರೂ ಪ್ರಶಸ್ತಿ ಇಟ್ಟಿಲ್ಲ. ಸರ್ಕಾರ ಸಾಂಸ್ಕೃತಿಕ ವರದಿ ತಯಾರಿಸಲು ಲೇಖಕರನ್ನು ನೇಮಿಸಿದೆ. ಏಕೆ ನಮ್ಮಿಂದ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ರಂಗಾಯಣದಂಥ ಸಂಸ್ಥೆಗಳು ಸರ್ಕಾರದ ಗುಬ್ಬಿ ಕಂಪನಿಗಳಂತೆ. ಇಂತಹ ಸಂಸ್ಥೆಗಳಿಂದ ಅಕ್ಕಪಕ್ಕದ ಹವ್ಯಾಸಿ ತಂಡಗಳಿಗೆ ಅನುಕೂಲ ಆಗುತ್ತಿದೆಯೇ? ಪಟ್ಟಭದ್ರ ಹಿತಾಸಕ್ತಿಗಳು ಇಲಾಖೆಯಲ್ಲಿ ಕುಳಿತಿದ್ದಾರೆ. ಇದನ್ನು ಎದುರಿಸಲು ನಾವೆಲ್ಲ ಒಟ್ಟಾಗಬೇಕು. ನಾವು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಂಡ್ಯ ರಮೇಶ್ ಹೇಗೋ ಸಿನಿಮಾ, ರಂಗಭೂಮಿ ಎರಡನ್ನೂ ಮಾಡಿಕೊಂಡು ಸ್ವಸಾಮರ್ಥ್ಯದಿಂದ ಬದುಕುತ್ತಿದ್ದಾರೆ. ರಂಗಾಯಣ ಮಾಡುವ ಕೆಲಸ ಅವರೇ ಮಾಡುತ್ತಿದ್ದಾರೆ, ಈಗ ರಂಗಾಯಣ ಏಕೆ ಬೇಕು? ನಾವು ಜನರ ಬಳಿಗೆ ಹೋಗೋಣ. ಅವರಲ್ಲಿಯೇ ದುಡ್ಡು ಕೇಳೋಣ. ನಿಮ್ಮ ಸಹವಾಸ ಬೇಡ ಎಂದು ಅಧಿಕಾರಿಗಳಿಗೆ ಹೇಳೋಣ. ಅವರು ಕೊಡುವ ಅನುದಾನ ನಿರಾಕರಿಸಿದಾಗ ಅವರ ಮುಖಕ್ಕೆ ಹೊಡೆದ ಹಾಗೆ ಆಗುತ್ತದೆ ಎಂದರು.
ಕನ್ನಡದಲ್ಲಿ ಅಪಾರ ಸಂಖ್ಯೆಯಲ್ಲಿ ಸಾಹಿತಿಗಳಿದ್ದಾರೆ. ಆಡಳಿತ ಭಾಷೆಯಾಗಿ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸದಿದ್ದರೆ ನಾವು ನಿಮ್ಮೊಡನೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಲಿ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನಾವು ಬರುವುದಿಲ್ಲ ಎಂದು ಹೇಳಲಿ. ಒಬ್ಬ ರಾಜೀನಾಮೆ ಕೊಟ್ಟರೆ ಸಾಕು, ಮತ್ತೊಬ್ಬ ನಾನು ಬರುತ್ತೇನೆ ಎಂದು ಸಿದ್ಧವಾಗಿರುತ್ತಾರೆ. ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ ಸಚಿವರಿಗೆ ಪತ್ರ ಬರೆದು ಕನ್ನಡ ಅನುಷ್ಠಾನಗೊಳಿಸಿ ಎಂದು ಕೇಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗಕರ್ಮಿ ಮಂಡ್ಯ ರಮೇಶ್, ಕಾವಾ ಆಡಳಿತಾಧಿಕಾರಿ ನಿರ್ಮಲಾ ಮಠಪತಿ, ಅಭಿಯಂತರರು ಅಧ್ಯಕ್ಷ ಎಚ್.ಎಸ್. ಸುರೇಶ್ ಬಾಬು, 3ನೇ ಕರ್ನಾಟಕ ಸಂಘಟಕರ ಸಮಾವೇಶದ ಅಧ್ಯಕ್ಷ ರಾಜಶೇಖರ ಕದಂಬ, ನೃತ್ಯಗಿರಿ ಸಂಸ್ಥಾಪಕಿ ಕೃಪಾ ಪಡ್ಕೆ, ಸಂಚಲನದ ದೀಪಕ್ ಮೈಸೂರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net