ಹೊಸ ಆಲೋಚನೆ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

 ಜೆಎಸ್‌ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪ್ರಶಾಂತ್ ರಾಜಶೇಖರ್,  ಡಾ. ಎಂ. ಧರ್ಮ ಪ್ರಸಾದ್, ಪ್ರೊ.ಬಿ.ವಿ.ಸಾಂಬಶಿವಯ್ಯ, ಡಾ.ಎಂ.ಪ್ರಭು ಇನ್ನಿತರರಿದ್ದರು.
ಜೆಎಸ್‌ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪ್ರಶಾಂತ್ ರಾಜಶೇಖರ್, ಡಾ. ಎಂ. ಧರ್ಮ ಪ್ರಸಾದ್, ಪ್ರೊ.ಬಿ.ವಿ.ಸಾಂಬಶಿವಯ್ಯ, ಡಾ.ಎಂ.ಪ್ರಭು ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಬ್ರಷ್ ಟೆಕ್ ಇಂಡಿಯಾ ಕಂಪನಿಯ ಪಾಲುದಾರ ಪ್ರಶಾಂತ್ ರಾಜಶೇಖರ್ ಸಲಹೆ
  • ಇಂಟರ್ನ್‌ಶಿಪ್ ಮತ್ತು ತರಬೇತಿ ಕಾರ್ಯಕ್ರಮ
ಮೈಸೂರು: ವಿದ್ಯಾರ್ಥಿಗಳು ಹೊಸ ಆಲೋಚನೆ, ಪ್ರಶ್ನಿಸುವ ಮನೋಭಾವ ಮತ್ತು ಹೊಸ ಕೌಶಲ ಕಲಿಯುವ ಹಂಬಲವನ್ನು ಹೊಂದಿರಬೇಕು ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಮೈಸೂರು ವಲಯದ ಸಂಚಾಲಕ, ಬ್ರಷ್ ಟೆಕ್ ಇಂಡಿಯಾ ಕಂಪನಿಯ ಪಾಲುದಾರ ಪ್ರಶಾಂತ್ ರಾಜಶೇಖರ್ ಹೇಳಿದರು
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಇಂಟರ್ನ್‌ಶಿಪ್ ಮತ್ತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೈಗಾರಿಕೆಗಳು ತಾಂತ್ರಿಕ ಜ್ಞಾನದ ಜತೆಗೆ ಸಕಾರಾತ್ಮಕ ಮನೋಭಾವ, ಉತ್ತಮ ವೀಕ್ಷಣಾ ಸಾಮರ್ಥ್ಯವಿರುವ ಶಿಸ್ತಿನಿಂದ ಕ್ರಿಯಾಶೀಲತೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೌಶಲಗಳಿರುವ ಅಭ್ಯರ್ಥಿಗಳನ್ನು ಹುಡುಕುತ್ತಿವೆ ಎಂದರು.
ಭಾರತದ ಆರ್ಥಿಕತೆಗೆ ಎಂಎಂಎಸ್‌ಇ ವಲಯವು ಒಂದು ಪ್ರಮುಖ ಅಂಗವಾಗಿದ್ದು ದೇಶಾದ್ಯಂತ ಸುಮಾರು 11 ಕೋಟಿ ಜನರಿಗೆ ಉದ್ಯೋಗ ನೀಡುತ್ತಿದೆ ಎಂದರು. 
ವಿದ್ಯಾರ್ಥಿಗಳು ತಮ್ಮ ಕಂಫರ್ಟ್ ಜೋನ್‌ನಿಂದ ಹೊರಬಂದು, ದಾಖಲೀಕರಣದ ಮಹತ್ವ ಅರಿತುಕೊಳ್ಳಬೇಕು.ಇಂಟರ್ನ್‌ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳು ಡಿಜಿಟಲೀಕರಣ, ಐಷಾರಾಮಿಯಿಲ್ಲದ ಅತಿ ಸಣ್ಣ ಸ್ಟಾರ್ಟಪ್ ಕಂಪನಿಯಲ್ಲೂ ಕೆಲಸ ನಿರ್ವಹಿಸುವುದು, ಮಾರುಕಟ್ಟೆ ಅನ್ವೇಷಣೆ, ಅಸಲಿ ಪ್ರವೃತ್ತಿ, ಭೌತಿಕ ಮತ್ತು ಮಾನಸಿಕ ಹಾಗೂ ಇತರ  ಅಗತ್ಯ ಕೌಶಲ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೈಸೂರಿನ ಪ್ರೊಸೆಟ್ಟ ಬಯೋಕಾನ್ಫಾರ್ಮಾಟಿಕ್ಸ್ ಕಂಪನಿಯ ಸಿಇಒ ಮತ್ತು ಹಿರಿಯ ವಿಜ್ಞಾನಿ ಡಾ. ಎಂ. ಧರ್ಮ ಪ್ರಸಾದ್ ಮಾತನಾಡಿ, ಯಶಸ್ಸಿಗೆ ಗುರಿ, ಕೌಶಲಗಳು ಮತ್ತು ನೆಟ್‌ವರ್ಕಿಂಗ್ ಈ ಮೂರೂ ಮೆಟ್ಟಿಲುಗಳು ಜೀವನದಲ್ಲಿ ಅತ್ಯವಶ್ಯಕ. ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸ್ಪಷ್ಟವಾಗಿ ಗುರುತಿಸಿ, ಅವುಗಳನ್ನು ತಲುಪಲು ಕ್ರಮಬದ್ಧವಾಗಿ ಕೆಲಸ ಮಾಡಬೇಕು ಎಂದರು.
 ಸಂವಹನ ಕೌಶಲ, ನಾಯಕತ್ವದ ಗುಣಗಳು, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ನಿರಂತರ ಕಲಿಕೆಯ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. 
ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ವೃತ್ತಿಜೀವನದ ಯೋಜನೆ ಹೊಂದಬೇಕು. ಅವುಗಳಿಗೆ ಅನುಗುಣವಾಗಿ ಕಠಿಣ ಪರಿಶ್ರಮದಿಂದ ಅಗತ್ಯ ಗುಣ ಮೈಗೂಡಿಸಿಕೊಂಡರೆ ಬದುಕಿನಲ್ಲಿ ಮುಂದಕ್ಕೆ ಹೋಗಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಭಾರತ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿದೆ. ಯುವಕರು ಪ್ರಸ್ತುತ ಕೈಗಾರಿಕಾ ವಲಯದಲ್ಲಿ ಉದ್ಯೋಗ ಪಡೆಯಲು ಪ್ರಾಯೋಗಿಕ ಕೌಶಲ ಮತ್ತು ಆಯ್ದ ಕ್ಷೇತ್ರಗಳಲ್ಲಿ ಅನುಭವ ಪಡೆಯುವುದು ಬಹಳ ಮುಖ್ಯ ಎಂದರು. 
ಮಾನವಿಕ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ ಮತ್ತು ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ನಲ್ಲಿ  ತೊಡಗಿಸಿಕೊಳ್ಳಬಹುದಾಂತಹ ವಿವಿಧ ಕ್ಷೇತ್ರ ಸೂಚಿಸಿ, ಸಂವಹನ ಕೌಶಲ, ತಂಡದೊಂದಿಗೆ ಕೆಲಸ, ಸಮಯ ನಿರ್ವಹಣೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಕೆಲಸದ ಮೇಲೆ ನಿಷ್ಠೆ ವೃತ್ತಿಜೀವನದ ಯಶಸ್ಸಿಗೆ ಅಗತ್ಯವಾದ ಗುಣಗಳು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. 
ಪ್ರಾಂಶುಪಾಲ ಡಾ.ಎಂ.ಪ್ರಭು, ಅದಿತಿ ಹೆಗ್ಡೆ, ಐಕ್ಯೂಎಸಿ ಸಂಯೋಜಕ ಡಾ. ರಾಜೇಂದ್ರಪ್ರಸಾದ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net