ಸರಗೂರು: ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗಮಧ್ಯೆಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ಸೋಮನಾಯಕ ಅವರ ಪತ್ನಿ ಆಶಾ ಅವರನ್ನು ಗುರುವಾರ ಬೆಳಗ್ಗೆ ಸುಮಾರು 8.15ರ ವೇಳೆಗೆ ಹೆರಿಗೆಗಾಗಿ 108 ಆಂಬುಲೆನ್ಸ್ ಮೂಲಕ ಹೆಚ್.ಡಿ.ಕೋಟೆಯ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.
ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಆಶಾ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ 108 ಆಂಬುಲೆನ್ಸ್‌ನ ಇಎಂಟಿ ಮಹೇಶ್ ಹಾಗೂ ಚಾಲಕ ಪ್ರಸನ್ನಕುಮಾರ್ ಅವರು ಸಮಯಪ್ರಜ್ಞೆ ಮೆರೆದಿದ್ದು, ಆಂಬುಲೆನ್ಸ್‌ನಲ್ಲಿಯೇ ಅಗತ್ಯ ವೈದ್ಯಕೀಯ ಸುಶ್ರೂಷೆ ಹಾಗೂ ನೆರವು ಒದಗಿಸಿದ್ದಾರೆ. ಬಳಿಕ ಆಶಾ ಅವರು ಆಂಬುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಸುರಕ್ಷಿತವಾಗಿ ಜನ್ಮ ನೀಡಿದ್ದಾರೆ.
ಹೆರಿಗೆ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಇಎಂಟಿ ಮಹೇಶ್ ಅವರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಚಾಲಕ ಪ್ರಸನ್ನಕುಮಾರ್ ಅವರು ಆಂಬುಲೆನ್ಸ್‌ನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಹೆರಿಗೆ ಬಳಿಕ ತಾಯಿ ಹಾಗೂ ನವಜಾತ ಗಂಡು ಮಗುವನ್ನು ಹೆಚ್.ಡಿ.ಕೋಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.
ತುರ್ತು ಸಂದರ್ಭದಲ್ಲಿ ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ 108 ಆಂಬುಲೆನ್ಸ್ ಸಿಬ್ಬಂದಿ ಮಹೇಶ್ ಹಾಗೂ ಪ್ರಸನ್ನಕುಮಾರ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.