ಬರ ತೀವ್ರತೆ ಕಂಡು ಡಿಸಿಎಂ ಕಳವಳ

ಗಟ್ಟವಾಡಿ ಗ್ರಾಮದ ರೈತರ ಜಮೀನಿನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಶಾಸಕ ದರ್ಶನ್ ಧ್ರುವನಾರಾಯಣ ಬರ ಸಮೀಕ್ಷೆ ನಡೆಸಿದರು. ಪಕ್ಷ ಕಾರ್ಯಕರ್ತರು, ಮುಖಂಡರು ಇದ್ದರು.
ಗಟ್ಟವಾಡಿ ಗ್ರಾಮದ ರೈತರ ಜಮೀನಿನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಶಾಸಕ ದರ್ಶನ್ ಧ್ರುವನಾರಾಯಣ ಬರ ಸಮೀಕ್ಷೆ ನಡೆಸಿದರು. ಪಕ್ಷ ಕಾರ್ಯಕರ್ತರು, ಮುಖಂಡರು ಇದ್ದರು.
Published on
ನಂಜನಗೂಡು: ತಾಲೂಕಿನ ವಿವಿಧೆಡೆ ರೈತರ ಜಮೀನುಗಳಲ್ಲಿ ಒಣಗಿದ ಬೆಳೆ ಅಧ್ಯಯನ ನಡೆಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಬರ ತೀವ್ರತೆ ಗಂಭೀರತೆಗೆ ಕಳವಳ ವ್ಯಕ್ತಪಡಿಸಿದರು.
ಬುಧವಾರ ತಾಲೂಕಿನ ದೊಡ್ಡ ಕೌಲಂದೆ ಹೋಬಳಿಯ ಗಟ್ಟವಾಡಿ ಗ್ರಾಮದಲ್ಲಿ ಮೈಸೂರು- ಚಾಮರಾಜನಗರ ಮುಖ್ಯರಸ್ತೆಯಲ್ಲಿ ಒಣಗಿರುವ ಸೂರ್ಯಕಾಂತಿ ಮತ್ತು ಜೋಳದ ಬೆಳೆಯನ್ನು ಪರಿಶೀಲನೆ ನಡೆಸಿ, ರೈತರಿಂದ ಮಾಹಿತಿ ಪಡೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಈ ಬಾರಿ ಮುಂಗಾರು ಕೈ ಕೊಟಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಮಳೆ ಇಲ್ಲದೆ ಬೆಳೆ ನಾಶವಾಗಿವೆ. ನಂಜನಗೂಡಿನ ಕೌಲಂದೆ ಹೋಬಳಿ ಗಟ್ಟವಾಡಿ ಗ್ರಾಮದಲ್ಲಿ ಜೋಳ ಮತ್ತು ಸೂರ್ಯ ಕಾಂತಿ ಬೆಳೆ ಸಂಪೂರ್ಣ ನಾಶವಾಗಿವೆ. ತಾಲೂಕಿನಲ್ಲಿ ಬರದ ತೀವ್ರತೆ ಗಂಭೀರವಾಗಿದೆ. ಬೆಳೆ ಕೈಗೆ ಸಿಗದಿದ್ದಾಗ ಅದರ ನೋವು ಏನು ಎಂಬ ಅರಿವಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ಬರ ಪರಿಹಾರಕ್ಕೆ ಸಮರ್ಪಕ ಅನುದಾನಕ್ಕೆ ಶಿಫಾರಸು ಮಾಡುತ್ತೇನೆ ಎಂದರು.
ನಂಜನಗೂಡು ಪಟ್ಟಣವನ್ನು ಸಿಲಿಕಾನ್ ಸಿಟಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ನಗರದಲ್ಲಿರುವ ಕಾರ್ಖಾನೆಗಳು ಯಾವ ದಿಕ್ಕಿನಲ್ಲಿ ಸಾಗುತ್ತದೆ? ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕಾ ಪ್ರದೇಶದಲ್ಲಿ ತಾಂತ್ರಿಕತೆಗೆ ಸಂಬಂಧಪಟ್ಟ ಕಾರ್ಖಾನೆಗಳು ಅಥವಾ ಉತ್ಪಾದಕ ಕಾರ್ಖಾನೆಗಳು ಯಾವ ಕಾರ್ಖಾನೆಗಳು ಅತಿ ಹೆಚ್ಚು ನಂಜನಗೂಡಿನಲ್ಲಿ ನೆಲೆ ನಿಲ್ಲುತ್ತವೆ ನಿರ್ಧಾರವಾಗುತ್ತದೆ ನಿರ್ಧಾರವಾಗುತ್ತದೆ ಎಂದರು.
ನಂಜನಗೂಡಿನ ತಾಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ, ಅಲ್ಲಿನ ಅಭಿವೃದ್ಧಿ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಎಇಇ ಮತ್ತು ಗುತ್ತಿಗೆದಾರರಿಗೆ ಕರೆದು 15 ದಿನದ ಒಳಗಾಗಿ ಸಂಪೂರ್ಣ ಕಾಮಗಾರಿ ಮುಗಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕರು ಯುವಕರಿದ್ದಾರೆ ಹಾಗೂ ಬುದ್ಧಿವಂತರಿದ್ದಾರೆ ಮುಂದಿನ ದಿನಗಳಲ್ಲಿ ಶಾಸಕರಿಗೆ ಉತ್ತಮ ಸ್ಥಾನಮಾನ ನೀಡಲಾಗುವುದು. 2028ಕ್ಕೆ ಇವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ದರ್ಶನ್ ಧ್ರುವನಾರಾಯಣ ಗೆದ್ದರೆ ಮುಂದಿನದು ನಮ್ಮ ಜವಾಬ್ದಾರಿ ಎಂದರು.
ಇದಕ್ಕೂ ಮೊದಲು ನಂಜನಗೂಡಿನ ಅಂಬೇಡ್ಕರ್ ವೃತ್ತದ ಬಳಿ ಶಾಸಕ ದರ್ಶನ್ ಧ್ರುವನಾರಾಯಣ, ಉಪಮುಖ್ಯಮಂತ್ರಿಗೆ ಸೇಬಿನ ಹಾರ ಹಾಕಿ ಸ್ವಾಗತಿಸಿದರು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ನಂತರ ಶ್ರೀ ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ದೇವಾಲಯ ಪ್ರಾಂಗಣದಲ್ಲಿ ಧ್ಯಾನ ಮಾಡಿ, ದೇವರ ದರ್ಶನ ಪಡೆದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ತಹಸೀಲ್ದಾರ್ ಸ್ಮಿತಾ ರಾಮು, ಬ್ಲಾಕ್ ಅಧ್ಯಕ್ಷ ಕುರಹಟ್ಟಿ ಮಹೇಶ್, ನಗರ ಬ್ಲಾಕ್ ಅಧ್ಯಕ್ಷ ಸಿ.ಎಂ.ಶಂಕರ್, ನಗರಸಭಾ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net