ಸ್ವಚ್ಛತೆ ಜಾಗೃತಿಗಾಗಿ ಸೈಕಲ್ ಜಾಥಾ

  ಪಾಲಿಕೆ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸೈಕಲ್ ಜಾಥಾ.
ಪಾಲಿಕೆ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸೈಕಲ್ ಜಾಥಾ.
Published on

ಪ್ರಮುಖ ಮುಖ್ಯಾಂಶಗಳು

  • ಉತ್ಸಾಹದಿಂದ ಪಾಲ್ಗೊಂಡಿದ್ದ 300ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು
  • ಮೈಸೂರು ಮಹಾನಗರ ಪಾಲಿಕೆಯಿಂದ ಆಯೋಜನೆ
ಮೈಸೂರು: ಸ್ವಚ್ಛ ಮೈಸೂರು ಅಭಿಯಾನದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸೈಕಲ್ ಜಾಥಾದ ಮೂಲಕ ಸ್ವಚ್ಛತೆ ಅರಿವು ಮೂಡಿಸಲಾಯಿತು. 
ವಿವಿಧ ವಯೋಮಾನದ 300ಕ್ಕೂ ಹೆಚ್ಚು ಸೈಕಲ್ ಸವಾರರು ಭಾಗಿಯಾಗಿದ್ದರು. 
ಮೈಸೂರು ನಗರವನ್ನು ದೇಶದ ಮೊದಲ ಸ್ವಚ್ಛ ನಗರವಾಗಿ ರೂಪಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಮತ್ತು ಬೆಂಬಲ ಯಾಚಿಸುವ ನಿಟ್ಟಿನಲ್ಲಿ ಪಾಲಿಕೆಯಿಂದ ವಿವಿಧ ಕಾರ್ಯಕ್ರಮ ರೂಪಿಸಿದ್ದು, ಅದರ ಭಾಗವಾಗಿ ನಗರದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಸೈಕಲ್ ಜಾಥಾ ನಡೆಯಿತು.
ಚಾಲನೆ ನೀಡಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಮೈಸೂರು ನಗರವನ್ನು ಸ್ವಚ್ಛ ನಗರವನ್ನಾಗಿ ರೂಪಿಸಬೇಕಾಗಿದೆ. ಪೌರಕಾರ್ಮಿಕರು, ಅಧಿಕಾರಿಗಳು ನಗರದ  ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ಮತ್ತು ಬೆಂಬಲ ಬೇಕಾಗಿದೆ ಎಂದರು.
ಕಳೆದ ವರ್ಷದ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರಿನ ಜನತೆ ಭಾಗಿಯಾಗಿ ಬೆಂಬಲ ಕೊಟ್ಟಿದ್ದರು. ಇದರಿಂದಾಗಿ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಮೈಸೂರು ನಗರಕ್ಕೆ 3ನೇ ಸ್ಥಾನ ದೊರೆತಿತ್ತು. 
ಈ ಬಾರಿಯೂ ಮೈಸೂರಿಗೆ ಸ್ವಚ್ಛತೆಯ ಪ್ರಶಸ್ತಿ ಲಭಿಸಬೇಕು ಎಂಬ ಆಶಯದೊಂದಿಗೆ ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ ಎಂದು ಕೋರಿದರು.
ಎಲ್ಲೆಂದರಲ್ಲಿ ಕಸ ಬೀಸಾಡದೆ, ಮನೆಯಲ್ಲಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವುದಕ್ಕೆ ಸಂಕಲ್ಪ ಮಾಡಬೇಕು. ಇದರಿಂದ ಮೈಸೂರಿನ ಸ್ವಚ್ಛತೆ ಕಾಪಾಡುವುದಕ್ಕೆ ಅನುಕೂಲವಾಗಲಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ ಸೈಕಲ್ ಚಾಲಕರಿಗೆ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಆರಂಭವಾದ ಜಾಥಾ ಕೆ.ಆರ್.ವೃತ್ತ, ದೇವರಾಜ ಅರಸ್ ರಸ್ತೆ, ಜೆಎಲ್‌ಬಿ ರಸ್ತೆ, ಡಾ.ಬಾಬು ಜಗಜೀವನರಾಮ್ ವೃತ್ತ, ಇರ್ವಿನ್ ರಸ್ತೆ ಸೇರಿದಂತೆ ವಿವಿಧ ಭಾಗದಲ್ಲಿ ಸಾಗಿ ಮತ್ತೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣ ತಲುಪಿ ಕೊನೆಗೊಂಡಿತು.
14 ಕಿ.ಮೀ. ದೂರದ ಜಾಥಾದಲ್ಲಿ ಸೈಕ್ಲಿಸ್ಟ್, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಪಾಲ್ಗೊಂಡು ಗಮನ ಸೆಳೆದರು. ಪಾಲಿಕೆ ವತಿಯಿಂದ 120 ಟ್ರಿಣ್ ಟ್ರಿಣ್ ಸೈಕಲ್ ನೀಡಲಾಗಿತ್ತು. ಉಳಿದವರು ತಾವೇ ಸೈಕಲ್ ತಂದು ಜಾಥಾದಲ್ಲಿ ಪಾಲ್ಗೊಂಡು ಪರಿಸರ ಪ್ರಜ್ಞೆ ಮೆರೆದರು.
ಪಾಲಿಕೆಯ ಉಪ ಆಯುಕ್ತ  ಸಿ.ಎಸ್, ಮಂಜು(ಅಭಿವೃದ್ಧಿ), ಕೆ.ಜಿ.ಎಸ್.ಸೋಮಶೇಖರ್ (ಕಂದಾಯ), ಕಾರ್ಯಪಾಲಕ ಇಂಜಿನಿಯರ್ ದೀಪಕ್, ಆರೋಗ್ಯಾಧಿಕಾರಿ ಕೆ.ಎಸ್.ಮೃತ್ಯುಂಜಯ, ವಲಯ ಆಯುಕ್ತರಾದ ಪ್ರತಿಭಾ, ರಮೇಶ್, ಮಂಜುನಾಥ್ ರೆಡ್ಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚೇತನ ಮತ್ತು ಮಧುಕರ್, ರಾಯಲ್ ರೈಡರ್ಸ್ ಮೈಸೂರು, ಸೈಕ್ಲೋಪೀಡಿಯಾ, ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್, ಮೈಸೂರು ಅಥ್ಲೆಟ್ಸ್ ಕ್ಲಬ್ ಹಾಗೂ ಮೈಸೂರು ಸೈಕ್ಲಿಂಗ್ ತಂಡದ ಸದಸ್ಯರು ಪಾಲ್ಗೊಂಡಿದ್ದರು. ಪ್ಯಾರಾಮೌಂಟ್, ಮೈ ಬೈಕ್, ಅರ್ನಾಲ್ಡ್ ಫಿಟ್ನೆಸ್  ಮತ್ತು ಕಾಂಗರೂ ಕೇರ್  ಸಂಸ್ಥೆಗಳ ಪ್ರತಿನಿಧಿಗಳು ಜಾಥಾಕ್ಕೆ ಸಾಥ್ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net