ಸೈಬರ್ ಕ್ರೈಂ ಸಮರ್ಥವಾಗಿ ನಿಭಾಯಿಸಬೇಕು : ಮೈಸೂರು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್

ಮೈಸೂರು ನಗರದಲ್ಲಿ ಶನಿವಾರ ಆಯೋಜಿಸಿದ್ದ 10ನೇ ತಂಡದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನದಲ್ಲಿ ಬೆಳಗಾವಿ ನಗರದ ಭುವನೇಶ್ವರಿ ಬಸಪ್ಪ ಪಿಡಶೆಟ್ಟಿ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದರು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪೊಲೀಸ್ ತರಬೇತಿ ಶಾಲೆಯ ಪ್ರಭಾರ ಪ್ರಾಂಶುಪಾಲ ಸಿ.ಮಲ್ಲಿಕ್, ಡಿವೈಎಸ್ಪಿ ಶಂಕರೇಗೌಡ ಪ್ರಶಸ್ತಿ ಪ್ರದಾನ ಮಾಡಿದರು.
ಮೈಸೂರು ನಗರದಲ್ಲಿ ಶನಿವಾರ ಆಯೋಜಿಸಿದ್ದ 10ನೇ ತಂಡದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನದಲ್ಲಿ ಬೆಳಗಾವಿ ನಗರದ ಭುವನೇಶ್ವರಿ ಬಸಪ್ಪ ಪಿಡಶೆಟ್ಟಿ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದರು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪೊಲೀಸ್ ತರಬೇತಿ ಶಾಲೆಯ ಪ್ರಭಾರ ಪ್ರಾಂಶುಪಾಲ ಸಿ.ಮಲ್ಲಿಕ್, ಡಿವೈಎಸ್ಪಿ ಶಂಕರೇಗೌಡ ಪ್ರಶಸ್ತಿ ಪ್ರದಾನ ಮಾಡಿದರು.
Published on
ಮೈಸೂರು: ಮೊದಲಿನಂತೆ ಸಾಂಪ್ರದಾಯಿಕ ಅಪರಾಧ ಪ್ರಕರಣಗಳು ಮಾತ್ರ ಇದೀಗ ಕಂಡು ಬರುತ್ತಿಲ್ಲ. ಇದರ ಜತೆಗೆ ಸೈಬರ್ ಕ್ರೈಂ ಹೆಚ್ಚಾಗಿ ಕಂಡು ಬರುತ್ತಿದ್ದು, ಇದನ್ನು ಸಮರ್ಥವಾಗಿ ನಾವು ನಿಭಾಯಿಸಬೇಕಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದರು.
ಜ್ಯೋತಿ ನಗರದ ಪೊಲೀಸ್ ತರಬೇತಿ ಶಾಲೆಯ ವತಿಯಿಂದ ಶನಿವಾರ ಆಯೋಜಿಸಿದ್ದ 10ನೇ ತಂಡದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, ಕಾನ್‌ಸ್ಟೇಬಲ್‌ಗಳು ಪೊಲೀಸ್ ಇಲಾಖೆಯ ಬೆನ್ನೆಲು ಇದ್ದಂತೆ. ಮಹಿಳೆಯರಿಗೆ ಇರುವಷ್ಟು ಶಕ್ತಿ, ತಾಳ್ಮೆ, ಕೆಲಸ ಮಾಡುವ ಉತ್ಸಾಹ ಬೇರೆಯವರಿಗೆ ಇಲ್ಲ, ಈ ಮಾತನ್ನು ನಾನು ನನ್ನ ವೃತ್ತಿ ಅನುಭವದಿಂದ ಹೇಳುತ್ತಿದ್ದೇನೆ ಎಂದರು.
ನಾನು ಡಿಸಿಪಿ ಆಗಿದ್ದಾಗ ಒಂದು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದವು. ಆ ಸಂದರ್ಭ ನಾನು ಆ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ಮಹಿಳಾ ಕಾನ್‌ಸ್ಟೇಬಲ್‌ಗಳೇ ಹೆಚ್ಚಾಗಿ ಇರುವುದು ಕಂಡುಬಂತು. ಹೀಗಾಗಿ ಅವರನ್ನು ರಾತ್ರಿ ಗಸ್ತಿಗೆ ಹಾಕುತ್ತಿರಲಿಲ್ಲ. ನಾನು ಆ ಮಹಿಳಾ ಕಾನ್‌ಸ್ಟೇಬಲ್‌ಗಳ ಬಳಿ ಮಾತುಕತೆ ನಡೆಸಿದ ನಂತರ ಅವರು ರಾತ್ರಿ ಗಸ್ತು ಮಾಡಲು ಉತ್ಸಾಹ ತೋರಿದರು. ಆ ನಂತರ ಠಾಣೆಯಲ್ಲಿ ಅಪರಾಧ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಮಹಿಳೆಯರಲ್ಲಿ ಎಷ್ಟು ಬದ್ಧತೆ, ಶಕ್ತಿ ಇದೆ ಎಂಬುದಕ್ಕೆ ಇದು ಒಂದು ನಿದರ್ಶನವಾಗಿದೆ ಎಂದು ಹೇಳಿದರು.
ನೂತನವಾಗಿ ನೇಮಕಗೊಂಡಿರುವ ಮಹಿಳಾ ಕಾನ್‌ಸ್ಟೇಬಲ್‌ಗಳು ಪೊಲೀಸ್ ಠಾಣೆಯ ಪ್ರತಿಯೊಂದು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪೊಲೀಸ್ ಠಾಣೆಯ ಪ್ರತಿಯೊಂದು ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಪಡೆಯುವ ಮೂಲಕ ಇಲಾಖೆಗೆ ಹೆಮ್ಮೆ ತರಬೇಕು ಎಂದು ಕರೆ ನೀಡಿದರು.
ಭುವನೇಶ್ವರಿ ಅತ್ಯುತ್ತಮ ಪ್ರಶಿಕ್ಷಣಾರ್ಥಿ: ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳ 10ನೇ ತಂಡದ ತರಬೇತಿಯಲ್ಲಿ ಬೆಳಗಾವಿ ನಗರದ ಭುವನೇಶ್ವರಿ ಬಸಪ್ಪ ಪಿಡಶೆಟ್ಟಿ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದರು. ಒಳಾಂಗಣ ಪ್ರಶಸ್ತಿ ವಿಭಾಗದಲ್ಲಿ ಬೆಂಗಳೂರು ನಗರ ಪಶ್ಚಿಮ ವಿಭಾಗದ ಮುತ್ತುರವ್ವಾ ಬಾಳಗೌಡ ಪಾಟೀಲ್ ಮತ್ತು ಬೆಂಗಳೂರು ನಗರ ಆಗ್ನೇಯ ವಿಭಾಗದ ರುಕ್ಮಿಣಿ ಕೃಷ್ಣಪ್ಪ ಪಮ್ಮಾರ ಪ್ರಥಮ ಸ್ಥಾನವನ್ನು ಹಂಚಿಕೊಂಡರು. ಮಂಡ್ಯದ ಎಂ.ಎಸ್. ಅನುಷಾ ತೃತೀಯ ಸ್ಥಾನ ಪಡೆದರು. ಹೊರಾಂಗಣ ಪ್ರಶಸ್ತಿ ವಿಭಾಗದಲ್ಲಿ ಬೆಳಗಾವಿ ನಗರದ ಭುವನೇಶ್ವರಿ ಬಸಪ್ಪ ಪಿಡಶೆಟ್ಟಿ ಪ್ರಥಮ, ಮಂಡ್ಯದ ಎಂ.ಎಸ್. ಅನುಷಾ ದ್ವಿತೀಯ, ಎಸ್‌ಎಲ್‌ಆರ್ ಫೈರಿಂಗ್ ಪ್ರಶಸ್ತಿ ವಿಭಾಗದಲ್ಲಿ ಶಿವಮೊಗ್ಗದ ಲಕ್ಷ್ಮೀ ನಂಜಪ್ಪಳವರ ಪ್ರಥಮ, ಮಂಡ್ಯದ ಎಂ.ಎಸ್. ಅನುಷಾ ದ್ವಿತೀಯ, ಎಂ.ಎಂ. ಪಿಸ್ತೂಲ್ ಫೈರಿಂಗ್ ಪ್ರಶಸ್ತಿ ವಿಭಾಗದಲ್ಲಿ ಬಳ್ಳಾರಿಯ ಕವಿತಾ ಸುರೇಶ ಬರಗಾಂವಿ ಪ್ರಥಮ, ಬೆಂಗಳೂರು ನಗರ ಪೂರ್ವ ವಿಭಾಗದ ಎ.ಎಸ್. ಸವಿತಾ ದ್ವಿತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪೊಲೀಸ್ ತರಬೇತಿ ಶಾಲೆಯ ಪ್ರಭಾರ ಪ್ರಾಂಶುಪಾಲ ಸಿ.ಮಲ್ಲಿಕ್, ಡಿವೈಎಸ್ಪಿ ಶಂಕರೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net