ತಾಲೂಕಿನಲ್ಲಿ ರಾಗಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ನಿಗದಿಪಡಿಸಿರುವ ಪ್ರಮಾಣ ಪೂರ್ಣಗೊಂಡಿದೆ ಎಂದು ಸಬೂಬು ಹೇಳಿ ನೋಂದಣಿ ಕಾರ್ಯವನ್ನು ಅ.15ಕ್ಕೆ ಅಂತ್ಯಗೊಳಿಸಿದೆ. ಆದರೆ ಇನ್ನೂ ಅರ್ಧದಷ್ಟು ಭಾಗದ ರೈತರು ನೋಂದಣಿ ಮಾಡಿಕೊಳ್ಳಲಾಗಿಲ್ಲ. ರೈತರು ಬೆಳೆದ ಬೆಳೆ ದಲ್ಲಾಳಿಗಳ ಪಾಲಾಗಬಾರದೆನ್ನುವ ಉದ್ದೇಶದಿಂದ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಿ ಅದು ಕೂಡ ಸಮರ್ಪಕವಾಗಿ ರೈತರಿಗೆ ನ್ಯಾಯ ನೀಡಲು ವಿಫಲವಾಗುತ್ತಿದೆ. ಇದೀಗ ನೋಂದಣಿಯಾಗದ ಬೆಳೆಗಾರರು ದಲ್ಲಾಳಿಗಳ ಮನೆಬಾಗಿಲಿಗೆ ಎಡತಾಕುವಂತಾಗಿದೆ. ರಾಜ್ಯದಲ್ಲಿ ಪ್ರಸ್ತುತ ಸಾಲಿಗೆ 60 ಲಕ್ಷ ಟನ್ ಖರೀದಿಗೆ ಸರ್ಕಾರ ನಿಗದಿಪಡಿಸಿದ್ದು, ಇದೀಗ ಸರ್ಕಾರ ನಿಗದಿಪಡಿಸಿದ ಪ್ರಮಾಣದಷ್ಟು ಖರೀದಿಸಿರುವ ಕಾರಣ ರಾಜ್ಯಾದ್ಯಂತ ನೋಂದಣಿ ಲಾಗಿನ್ ಸ್ಥಗಿತಗೊಳಿಸಲಾಗಿದೆ. ತಾಲೂಕಿನಲ್ಲಿ 1.30 ಲಕ್ಷ ಟನ್ ಪ್ರಮಾಣ ನೋಂದಣಿಯಾಗಿದ್ದು, ಇನ್ನೂ 5-10 ಸಾವಿರ ಟನ್ ಬಾಕಿ ಉಳಿದಿದೆ. ರೈತರಿಗೆ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ಉಳಿದಿರುವ ರಾಗಿಯನ್ನೂ ಖರೀದಿಸಬೇಕೆಂದು ಅವರು ಆಗ್ರಹಿಸಿದ್ದಾರೆ.