ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವ ಷಡ್ಯಂತ್ರ

 ಹುಣಸೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿದರು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಗದ್ದಿಗೆ ದೇವರಾಜ್ ಇತರರಿದ್ದರು.
ಹುಣಸೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿದರು. ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಗದ್ದಿಗೆ ದೇವರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ
ಹುಣಸೂರು: ಜಿಲ್ಲಾಡಳಿತ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಕೈ ಬಿಟ್ಟಿರುವ ಮತದಾರರ ಪಟ್ಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಹುಣಸೂರು ವಿಧಾನಸಭಾ ವ್ಯಾಪ್ತಿಯ ಪಕ್ಷದ ಬೂತ್ ಅಧ್ಯಕ್ಷ(ಬಿಎಲ್‌ಎ)ರ ಸಭೆಯಲ್ಲಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಪ್ರಮುಖವಾಗಿ ಪರಿಶಿಷ್ಟರು, ಮುಸ್ಲಿಂ, ಕ್ರಿಶ್ಚಿಯನ್‌ರನ್ನೇ ಗುರಿ ಮಾಡಿ ಮತದಾರರ ಪಟ್ಟಿಯಿಂದ ಕೆಲ ಮತದಾರರ ಹೆಸರನ್ನು ಕೈಬಿಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಬಿಎಲ್‌ಎಗಳು ಎಚ್ಚರವಹಿಸಬೇಕು. ಜಿಲ್ಲಾಧಿಕಾರಿಗಳು ಮ್ಯಾಪಿಂಗ್ ಇನ್ನೂ ಸಮಯವಿದೆ ಎನ್ನುತ್ತಿದ್ದಾರೆ. ಆದರೆ ಈಗಾಗಲೇ ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯ ಮುಗಿದಿದೆ. ಮ್ಯಾಪಿಂಗ್ ಕಾರ್ಯದಲ್ಲಿ ಸಮರ್ಪಕ ದಾಖಲೆ ನೀಡಲು ಮಾತ್ರ ಸಮಯವಿದೆ ಎಂದರು.
ಮೈಸೂರು- ಕೊಡಗು ಲೋಕಸಭಾ ಚುನಾವಣೆಯಲ್ಲಿ ಮಹಾರಾಜರು ಬರುತ್ತಾರೆಂದು ನನ್ನನ್ನು ಸೋಲಿಸಿದರು. ಕೇಂದ್ರ ಸರ್ಕಾರ ದೇಶದಲ್ಲಿ ಎಲ್ಲ ಅಗತ್ಯ ವಸ್ತುಗಳಗೆ ಬೆಲೆ ಏರಿಕೆ ಮಾಡಿದೆ. ಈ ಬಗ್ಗೆ ಪ್ರಶ್ನಿಸಿದರೆ ಜಾಗತಿಕವಾಗಿ ಯುದ್ಧ ನಡೆಯುತ್ತಿದೆ ಎಂಬ ಸಾಬೂಬು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರವು ಕೇಂದ್ರ ಚುನಾವಣಾ ಆಯೋಗದ ಮೂಲಕ ತಾಲೂಕಿನಲ್ಲಿ 23 ಸಾವಿರ ಸೇರಿದಂತೆ ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮತದಾರ ಹೆಸರನ್ನು ಪಟ್ಟಿಯಿಂದ ಕೈಬಿಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಪಕ್ಷದ ಬಿಎಲ್‌ಎಗಳು ಎಚ್ಚೆತ್ತು ಸರಿಯಾದ ದಾಖಲೆಗಳ ಪರಿಶೀಲನೆ ಮಾಡುವ ಬಿಎಲ್‌ಒಗಳ ಬಳಿಯಲ್ಲಿ ಪಟ್ಟಿ ಇದ್ದು, ಯಾರ ಹೆಸರು ಕೈಬಿಟ್ಟಿದ್ದಾರೆ, ಸೇರಿಸಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಒಂದೇ ಒಂದು ಲೋಪ ಕಂಡು ಬಂದರೂ ಕೂಡಲೇ ನಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗದ್ದಿಗೆ ದೇವರಾಜ್, ಬ್ಲಾಕ್ ಅಧ್ಯಕ್ಷರಾದ ಪ್ರೇಮ್‌ಕುಮಾರ್, ಬಾಲಸುಂದರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಅಮರನಾಥ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net