ಮಕ್ಕಳಿಗೆ ಸೊಪ್ಪುಗಳ ಪರಿಚಯ ಅಗತ್ಯ:ಹಾವೇರಿಯ ತಿಮ್ಮಾಪುರದ ರೈತ ಮಹಿಳೆ ನೀಲಮ್ಮ
ನಗರದ ನಂಜರಾಜ ಬಹಾದ್ದೂರ್ ಛತ್ರದಲ್ಲಿ ದೇಸಿ ಸೊಪ್ಪು ಮೇಳ’ ಆಯೋಜಿಸಲಾಗಿತ್ತು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆಧುನೀಕ ದಿನಗಳಲ್ಲಿ ಎಲ್ಲವೂ ಪ್ಯಾಕೇಟ್‌ಮಯವಾಗಿದ್ದು, ನೈಜತೆಯನ್ನು ಗುರುತಿಸದಂತಾಗಿದೆ
ಆರೋಗ್ಯದ ದೃಷ್ಟಿಯಿಂದ ನಮ್ಮ ಮಕ್ಕಳಿಗೂ ಇಂಥ ಸೊಪ್ಪಿನ ಜ್ಞಾನ ತಿಳಿಸಬೇಕು
ಮೈಸೂರು:ನಮ್ಮ ಬಾಲ್ಯದಲ್ಲಿ ಹಿರಿಯರು ಹೊಲ, ಗದ್ದೆ, ಕೆರೆ-ಕುಂಟೆಗಳ ದಂಡೆಯಲ್ಲಿ ಸಿಗುತ್ತಿದ್ದ ತಿನ್ನುವ ಸೊಪ್ಪುಗಳ ಪರಿಚಯ ಮಾಡಿಕೊಡುತ್ತಿದ್ದರು. ಇದರಿಂದಾಗೇ ನಾನು ನೂರಕ್ಕೂ ಹೆಚ್ಚಿನ ಸೊಪ್ಪುಗಳನ್ನು ಗುರುತಿಸಬಲ್ಲೆ ಎಂದು ಹಾವೇರಿಯ ತಿಮ್ಮಾಪುರದ ರೈತ ಮಹಿಳೆ ನೀಲಮ್ಮ ಕೇಮಣ್ಣನವರ್ ತಿಳಿಸಿದರು.
ಸಹಜ ಸಮೃದ್ಧ, ಸಿಂಗ್ ಡೈವರ್ಸಿಟಿ, ಹುಲಿಕಾಡು ರೈತ ಉತ್ಪಾದಕರ ಕಂಪನಿ, ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದಿಂದ ನಗರದ ನಂಜರಾಜ ಬಹಾದ್ದೂರ್ ಛತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ‘ದೇಸಿ ಸೊಪ್ಪು ಮೇಳ’ಕ್ಕೆಚಾಲನೆ ನೀಡಿ ಮಾತನಾಡಿದರು.
ಆದರೆ ಆಧುನೀಕ ದಿನಗಳಲ್ಲಿ ಎಲ್ಲವೂ ಪ್ಯಾಕೇಟ್‌ಮಯವಾಗಿದ್ದು, ನೈಜತೆಯನ್ನು ಗುರುತಿಸದಂತಾಗಿದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ನಮ್ಮ ಮಕ್ಕಳಿಗೂ ಇಂಥ ಸೊಪ್ಪಿನ ಜ್ಞಾನ ತಿಳಿಸಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕಳೆನಾಶಕಗಳ ಬಳಕೆ ಹೆಚ್ಚಾಗಿರುವ ಪರಿಣಾಮ ಸೊಪ್ಪಿನ ವೈವಿಧ್ಯ ಕಣ್ಮರೆಯಾಗುತ್ತಿದೆ. ಆರೋಗ್ಯ ಕಾಪಾಡುವ ಸೊಪ್ಪಿನ ಬಳಕೆ ಹೆಚ್ಚು ಮಾಡಿ, ಜವಾರಿ ಸೊಪ್ಪುಗಳನ್ನು ಉಳಿಸಿಕೊಳ್ಳಬೇಕು ಎಂದರು.
ಕೇರಳದ ಕೀಸ್ಟೋನ್ ಫೌಂಡೇಷನ್‌ನ ಹಿರಿಯ ಕಾರ್ಯಕ್ರಮ ಸಂಯೋಜಕ ರಾಮಚಂದ್ರನ್, ‘ಸಕ್ಕತ್ ಸೊಪ್ಪು’ ಪುಸ್ತಕ ಬಿಡುಗಡೆ ಮಾಡಿ, ಆಹಾರಕ್ಕಾಗಿ 3 ಸಾವಿರಕ್ಕೂ ಹೆಚ್ಚು ಸಸ್ಯ ಪ್ರಭೇದಗಳನ್ನು ಬಳಸಲಾಗುತ್ತದೆ. ಆದರೆ ಸಾಮಾನ್ಯ ಜನ ಕೇವಲ 30 ಪ್ರಭೇದಗಳನ್ನು ಮಾತ್ರ ಆಹಾರಕ್ಕಾಗಿ ಬಳಸುತ್ತಿದ್ದಾರೆ. ಉಳಿದ 2970 ಪ್ರಭೇದಗಳನ್ನು ಸ್ಥಳೀಯ ಹಾಗೂ ಬುಡಕಟ್ಟು ಸಮುದಾಯಗಳು ಮಾತ್ರ ಬಳಸುತ್ತಿವೆ. ಈ ಸಾಂಪ್ರದಾಯಿಕ ಜ್ಞಾನವು ಹೊಸ ಪೀಳಿಗೆಯಲ್ಲಿ ಕಾಣೆಯಾಗುತ್ತಿದ್ದು, ಅದನ್ನು ಪರಿಚಯಿಸಲು ಈ ಸೊಪ್ಪು ಮೇಳ ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರದ ಜಿ.ಎಲ್.ಮುರಳೀಧರ ಗುಂಗುರುಮಳೆ ಮಾತನಾಡಿ, ಸಾಮಾನ್ಯವಾಗಿ ನಾವು ಕಳೆಗಳನ್ನು ಬೆಳೆ ನಾಶಪಡಿಸುವ ಅನಗತ್ಯ ಸಸ್ಯಗಳೆಂದು ಭಾವಿಸುತ್ತೇವೆ. ಆದರೆ ಈ ಕಳೆಗಳು ಅಗಾಧವಾದ ವೈವಿಧ್ಯವನ್ನು ಹೊಂದಿದ್ದು, ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅವುಗಳ ನಿರಂತರ ಬಳಕೆಯಿಂದ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುತ್ತೂರಿನ ಐಸಿಎಆರ್-ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್.ಜ್ಞಾನೇಶ್ ಮಾತನಾಡಿ, ಈ ವರ್ಷ ಮೈಸೂರಿನಲ್ಲಿ ಶೇ.49ರಷ್ಟು ಮಳೆಯ ಕೊರತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಡಿಮೆ ನೀರಿನಲ್ಲೂ ಬೆಳೆಯಹುದಾದ ಸೊಪ್ಪುಗಳನ್ನು ಬೆಳೆಯುವುದು ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಚಿಗುರು ಇಕೋಸ್ಪೇಸ್ಸ್ ನ ಸಂಸ್ಥಾಪಕ ಶ್ರೀವತ್ಸ ಗೋವಿಂದರಾಜು ಮಾತನಾಡಿದರು.
ಸೊಪ್ಪಿನ ಲೋಕ ಅನಾವರಣ
ಎರಡು ದಿನಗಳ ಸೊಪ್ಪು ಮೇಳದಲ್ಲಿ 200ಕ್ಕೂ ಹೆಚ್ಚು ಬಗೆಯ ಸೊಪ್ಪುಗಳು ಪ್ರದರ್ಶನದಲ್ಲಿ ಇರಲಿವೆ. ನಾಗರಹೊಳೆ ಭಾಗದ ಬೆರಕೆ ಸೊಪ್ಪು ಮತ್ತು ಅಣ್ಣೇಸೊಪ್ಪು, ಕನಕಪುರ ಕಾಡಿನ ಸೀಗೆಸೊಪ್ಪು, ಕುಂದಗೋಳದ ಕಿರಕಸಾಲಿ, ಗುರ್ಜಿ ಮೊದಲಾದ ಒಣಭೂಮಿ ಸೊಪ್ಪುಗಳನ್ನು ಮಾರಾಟಕ್ಕೆ ತಂದಿದ್ದಾರೆ. ಅಲ್ಲದೇ ಕೇರಳದ ವಯನಾಡಿನ ಗುಂಪು ಔಷಧೀಯ ಮತ್ತು ಕಾಡು ಸೊಪ್ಪುಗಳನ್ನು ಪ್ರದರ್ಶನದಲ್ಲಿವೆ.
ಸೊಪ್ಪಿನ ಮೇಳದಲ್ಲಿ ರಾಗಿಮುದ್ದೆ-ಬಸ್ಸಾರು, ಜೋಳದ ರೊಟ್ಟಿ - ಕಿರಕಸಾಲಿ ಪಲ್ಯ, ಸೊಪ್ಪಿನ ಚಪಾತಿ ಮೊದಲಾದ ಖಾದ್ಯಗಳು ಬಾಯಿ ಚಪ್ಪರಿಸಲು ಸಿಗಲಿವೆ. ಕನಕಪುರದ ಕೊಳಗೊಂಡನಹಳ್ಳಿ ಮಹಿಳಾ ಸಂಘದವರು ರಾಗಿ ಶಾವಿಗೆ, ಹುರಕ್ಕಿ ಉಂಡೆ, ಕಳಲೆ ಸೊಪ್ಪಿನ ಸಾರಿನ ಊಟವನ್ನು ಪರಿಚಯಿಸಿದ್ದಾರೆ.