ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಅಧ್ಯಕ್ಷತೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಯುಕೇಶ್ ಕುಮಾರ್, ಚಂದ್ರನಾಯಕ್, ಆರ್.ಐಶ್ವರ್ಯ, ಹರ್ಷ ಪ್ರಿಯಂವದ ಇದ್ದರು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಧಿಕಾರಿಗಳಿಗೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಸೂಚನೆ
ಗತಿ ಪರಿಶೀಲನಾ ಸಭೆ
ಮೈಸೂರು: ಭೋವಿ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜು, ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಬೇಕು. ಜಾತಿ ಪ್ರಮಾಣಪತ್ರವನ್ನು ವಿಳಂಬವಾಗದಂತೆ ಒದಗಿಸಬೇಕು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭೋವಿ ಸಮುದಾಯದ ಮಹಿಳೆಯರನ್ನು ಒಟ್ಟುಗೂಡಿಸಿ ಸಂಘ ರಚಿಸಿ, ಅವರಿಗೆ ಸರ್ಕಾರದ ಸಾಲ ಯೋಜನೆಗಳನ್ನು ಒದಗಿಸಬೇಕು. ಇದರೊಂದಿಗೆ ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದೂ ಅಧಿಕಾರಿಗಳಿಗೆ ತಿಳಿಸಿದರು.
ಮೈಕ್ರೋ ಕ್ರೆಡಿಟ್ ಯೋಜನೆಯಡಿ ಭೋವಿ ಸಮುದಾಯದ ಕನಿಷ್ಠ 10 ಮಹಿಳಾ ಸದಸ್ಯರಿರುವ ಸ್ತ್ರೀ ಸ್ವಸಹಾಯ ಸಂಘಗಳಿಗೆ ಉತ್ಪ್ಪಾದನಾ ಚಟುವಟಿಕೆಗೆ 2.50 ಲಕ್ಷ ರೂ. ಸಹಾಯಧನ ಮತ್ತು 2.50 ಲಕ್ಷ ರೂ. ಸಾಲ ಸೌಲಭ್ಯ ದೊರೆಯುತ್ತದೆ. ಈ ಸಮುದಾಯದ ಹೆಣ್ಣು ಮಕ್ಕಳು ಈ ಯೋಜನೆ ಪಡೆಯಲು ಮುಂದೆ ಬರಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಭೋವಿ ಸಮುದಾಯದ ಮುಖಂಡರು ಮಹಿಳೆಯರಿಗೆ ಈ ಮಾಹಿತಿ ನೀಡಿ ಯೋಜನೆ ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು.
ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಆಯ್ಕೆ ಮಾಡಲಾಗುವುದು. ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಶೇ.100ರಷ್ಟು ಸಾಧನೆ ಮಾಡಬೇಕು. ಭೋವಿ ಮುಖಂಡರಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಹೆಚ್ಚು ಜನರು ಅರ್ಜಿ ಸಲ್ಲಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರನಾಯಕ್ ಮಾತನಾಡಿ, 2016ರಲ್ಲಿ ಸ್ಥಾಪನೆ ಆಗಿರುವ ನಿಗಮದಿಂದ ಭೋವಿ ಸಮುದಾಯದವರಿಗೆ ವಿವಿಧ ರೀತಿಯ ಸಾಲ ಸೌಲಭ್ಯ ಒದಗಿಸಿ ಅವರ ಆರ್ಥಿಕ ಮಟ್ಟ ಸುಧಾರಿಸುವ ಉದ್ದೇಶ ಇದೆ. ಇದಲ್ಲದೇ ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರ ಇಲಾಖೆಯ ಎಸ್‌ಸಿಎಸ್‌ಪಿ ಯೋಜನೆಯಡಿ ರೂಪಿಸಿರುವ ಸೌಲಭ್ಯಗಳನ್ನು ಸಹ ಪಡೆಯಬಹುದು ಎಂದರು.
ನಿಗಮದಿಂದ ನೀಡಲಾಗುವ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಕುರಿ, ಮೇಕೆ ಸಾಕಾಣಿಕೆ, ಉದ್ಯಮ ಶೀಲತಾಭಿವೃದ್ಧಿ ಯೋಜನೆೆ, ಹೈನುಗಾರಿಕೆ, ಸ್ವಾವಲಂಭಿ ಸಾರಥಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಯ ಉಪಯುಕ್ತತೆಯ ಬಗ್ಗೆ ವಿವರಿಸಿದರು.
ಭೋವಿ ಜನಾಂಗದವರು ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರ ರೂಪಿಸಿರುವ ಯೋಜನೆ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
2011ರ ಜನಗಣತಿಯ ಪ್ರಕಾರ ಭೋವಿ ಜನಾಂಗದ 11.20 ಲಕ್ಷ ಜನಸಂಖ್ಯೆ ಇದ್ದು, ಜಿಲ್ಲೆಯಲ್ಲಿ 14,376 ಗಂಡಸರು, 14,202 ಮಹಿಳೆಯರು ಸೇರಿದಂತೆ 28,578 ಜನರಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ಮಾತನಾಡಿ, ಈವರೆಗೆ ಬ್ಯಾಂಕ್‌ನಿಂದ ಸಾಲ ಪಡೆಯದೇ ಇರುವ ಫಲಾನುಭವಿಗಳ ಸಿಬಿಲ್ ಸ್ಕೋರ್ ಶೂನ್ಯ ಇರುತ್ತದೆ. ಇದು ಸಾಲ ಪಡೆಯಲು ಸಮಸ್ಯೆಯಾಗುವುದಿಲ್ಲ. ಭೋವಿ ನಿಗಮದಿಂದ ಯೋಜನೆವಾರು ನೋಡಲ್ ಅಧಿಕಾರಿ ನೇಮಕ ಮಾಡಿ ಫಲಾನುಭವಿಗಳು ಹಾಗೂ ಬ್ಯಾಂಕ್‌ನೊಂದಿಗೆ ಸಮನ್ವಯ ಕೆಲಸ ನಿರ್ವಹಿಸಬೇಕು.
ಬ್ಯಾಂಕ್‌ನಿಂದ ಸಾಲ ನೀಡಲು ನಿರಾಕರಣೆಯಾದರೆ ನಿಖರವಾದ ಕಾರಣ ಸಿಗುತ್ತದೆ. ಸಮಸ್ಯೆ ಇದ್ದಲ್ಲಿ ಸರಿಪಡಿಸಲಾಗುವುದು. ಶೇ.100ರಷ್ಟು ಗುರಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಭೋವಿ ಸಮುದಾಯದ ಮುಖಂಡರು, ನಿಗಮದ ವಿವಿಧ ಯೋಜನೆಗಳ ಕುರಿತು ಜನರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಬ್ಯಾಂಕ್‌ನಿಂದ ಸಾಲ ಪಡೆಯುವ ಯೋಜನೆಯನ್ನು ಸರಳೀಕರಣಗೊಳಿಸಬೇಕು. ಇವುಗಳು ಬಡ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.