ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ

ತಟ್ಟೆಕೆರೆಗೇಟ್‌ನಲ್ಲಿ ಆಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ತಟ್ಟೆಕೆರೆಗೇಟ್‌ನಲ್ಲಿ ಆಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on
ಹನಗೋಡು: ಹೋಬಳಿಯ ತಟ್ಟೆಕೆರೆಗೇಟ್‌ನಲ್ಲಿ ಶುಕ್ರವಾರ ಶ್ರೀ ರಾಮನವಮಿ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಶುಕ್ರವಾರ ಮುಂಜಾನೆಯಿಂದ ವಿವಿಧ ಪೂಜಾ ವಿಧಾನದ ನಂತರ ಹೂವಿನಿಂದ ಅಲಂಕೃತಗೊಂಡಿದ್ದ ರಥವನ್ನು ಬೆಳಗ್ಗೆ 10 ಗಂಟೆಗೆ ಮಹಿಳೆಯರು, ಮಕ್ಕಳೆನ್ನದೆ ಭಕ್ತರೆಲ್ಲರೂ ಭಕ್ತಿಭಾವದಿಂದ ಎಳೆದರು. ರಥವನ್ನು ಹುಣಸೂರು-ಹನಗೋಡು ಮುಖ್ಯರಸ್ತೆಯ ಹೊಸಕೋಟೆ ಕೆರೆಯವರೆಗೆ ಎಳೆದು ಮತ್ತೆ ಹಿಮ್ಮುಖವಾಗಿ ಎಳೆತಂದು ಮುಖ್ಯರಸ್ತೆ ಬದಿ ನಿಲ್ಲಿಸಿದರು. ಸಂಜೆ ರಥವನ್ನು ಮತ್ತೆ ದೇವಸ್ಥಾನದ ಆವರಣದ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ರಥಕ್ಕೆ ಭಕ್ತರು, ನವ ದಂಪತಿ ಹಣ್ಣು-ದವನ ಎಸೆದು ಪುನೀತರಾದರು. ರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ರಥೋತ್ಸವಕ್ಕೂ ಮುನ್ನ ಉತ್ಸವಮೂರ್ತಿಯನ್ನು ಮುತ್ತೈದೆಯರು ಉಯ್ಯಲೆಯಲ್ಲಿಟ್ಟು ಪೂಜೆ ಸಲ್ಲಿಸಿ ತೂಗಿದರು. ನಂತರ ಉತ್ಸವ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ರಥದ ಮೇಲಕ್ಕೇರಿಸಿದರು.
ರಥದ ಕೆಳಗೆ ಕಂದಮ್ಮಗಳು: ಸಂಪ್ರದಾಯದಂತೆ ರಥೋತ್ಸವಕ್ಕೂ ಮುನ್ನ ಹಲವು ಪಾಲಕರು ತಮ್ಮ ಪುಟ್ಟ ಕಂದಮ್ಮಗಳನ್ನು ರಥದ ಕೆಳಗೆ ಮಲಗಿಸಿ ಹರಕೆ ತೀರಿಸಿದರು. ದೇವಸ್ಥಾನ ಸಮಿತಿ ವತಿಯಿಂದ ಜಾತ್ರೆಗೆ ಆಗಮಿಸಿದ್ದ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಸಾವಿರಾರು ಮಂದಿ ಭಕ್ತರು ದಾಸೋಹದಲ್ಲಿ ಭಾಗಿಯಾಗಿದ್ದರು.
ರಥೋತ್ಸವ ನಂತರ ಕೋಸಂಬರಿ, ಪಾನಕ ವಿತರಿಸಲಾಯಿತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ರಾಮಚಂದ್ರು, ಕಾರ್ಯದರ್ಶಿ ಶ್ರೀ ನಿವಾಸಶೆಟ್ಟಿ ಸೇರಿದಂತೆ ಗ್ರಾಮದ ಮುಖಂಡರು ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net