ಎಲ್ಲೆಡೆ ಜಾತಿ ಹಣತೆಯೇ ಬೆಳಗುತ್ತಿದೆ

 ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ‘ನವೋದಯ ಕಾವ್ಯದ ಓದಿನ ಹಬ್ಬ’ ಕಾರ್ಯಕ್ರಮವನ್ನು ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ ಉದ್ಘಾಟಿಸಿದರು.ಪ್ರೊ.ಕೆ.ಸಿ.ಶಿವಾರೆಡ್ಡಿ, ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರೊ.ಎಸ್.ಡಿ.ಶಶಿಕಲಾ ಇನ್ನಿತರರಿದ್ದರು.
ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ‘ನವೋದಯ ಕಾವ್ಯದ ಓದಿನ ಹಬ್ಬ’ ಕಾರ್ಯಕ್ರಮವನ್ನು ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ ಉದ್ಘಾಟಿಸಿದರು.ಪ್ರೊ.ಕೆ.ಸಿ.ಶಿವಾರೆಡ್ಡಿ, ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರೊ.ಎಸ್.ಡಿ.ಶಶಿಕಲಾ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನವೋದಯ ಕಾವ್ಯದ ಓದಿನ ಹಬ್ಬ
  • ನವೋದಯ ಸಂದರ್ಭ; ಕನ್ನಡ ಕಾವ್ಯದ ಅನನ್ಯತೆ’ ಕುರಿತು ವಿಚಾರಸಂಕಿರಣ
  • ಪುಸ್ತಕ ಓದದಿದ್ದರೆ ಜ್ಞಾನ ಬರಲು ಸಾಧ್ಯವೇ ಇಲ್ಲ
ಮೈಸೂರು: ಕುವೆಂಪು ಸಾಹಿತ್ಯವನ್ನು ಓದಿ, ಅವರ ಚಿಂತನೆ ಅರ್ಥೈಸಿಕೊಂಡು ಜೀವನ ಸಾಗಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ ಹೇಳಿದರು.
ಕುವೆಂಪು ಜಯಂತಿ ಅಂಗವಾಗಿ ಮೈವಿವಿ ಕುವೆಂಪು ಕಾವ್ಯಾಧ್ಯಯನ ಪೀಠ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಮಾನಸಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ‘ನವೋದಯ ಕಾವ್ಯದ ಓದಿನ ಹಬ್ಬ’ ಮತ್ತು ನವೋದಯ ಸಂದರ್ಭ; ಕನ್ನಡ ಕಾವ್ಯದ ಅನನ್ಯತೆ’ ಕುರಿತು ವಿಚಾರಸಂಕಿರಣದಲ್ಲಿ ಮಾತನಾಡಿದರು.
ಕುವೆಂಪು ಕುರಿತು ಕೇಳುತ್ತೇವೆ, ಮಾತನಾಡುತ್ತೇವೆ. ಆದರೆ ಅವರ ವಿಚಾರಧಾರೆಯನ್ನು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ಅದನ್ನು ಮೈಗೂಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡಲ್ಲ. ಇದಕ್ಕೆ ವಿದ್ಯಾರ್ಥಿಗಳು, ಅಧ್ಯಾಪಕರು ಹೊರತಲ್ಲ. ಇದು ಸರಿಯೇ? ಎಂದು ಪ್ರಶ್ನಿಸಿದರು.
ಕುವೆಂಪು ಅವರದ್ದು ವಿಚಾರಶೀಲತೆಯ ಸಾಹಿತ್ಯ. ಇಂತಹ ಕಾವ್ಯ, ಕಾದಂಬರಿ ಓದಿದರೆ ಮನಸ್ಸು ಬದಲಾವಣೆಯಾಗುತ್ತದೆ. ಕ್ರಿಯಾತ್ಮಕದತ್ತ ಮಿಡಿಯುತ್ತದೆ. ಕುವೆಂಪು, ಬೇಂದ್ರಯಂತಹವರ ಸಾಹಿತ್ಯ ಕೃತಿಗಳನ್ನು ಓದಿ ಅವರ ಚಿಂತನೆಯನ್ನು ತಿಳಿದುಕೊಳ್ಳಬೇಕು. ಪುಸ್ತಕ ಓದದಿದ್ದರೆ ಜ್ಞಾನ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದರು.
1916ರಲ್ಲಿ ಶುರುವಾದ ಮೈಸೂರು ವಿವಿ 1956ರವರೆಗೂ ಮಹಾರಾಜ ಕಾಲೇಜು, ಯುವರಾಜ ಕಾಲೇಜು ಮತ್ತು ಕ್ರಾಫರ್ಡ್ ಹಾಲ್‌ಗಷ್ಟೇ ಸೀಮಿತವಾಗಿತ್ತು. ವಿಶ್ವವಿದ್ಯಾಲಯಕ್ಕೆ ವಿಸ್ತಾರವಾದ ಜಾಗ ಇರಬೇಕು ಎಂದು ಬಯಸಿದ ಕುವೆಂಪು ಅವರು, ವಿವಿಯಿಂದ ದುಡ್ಡು ಕೊಟ್ಟು ಜಾಗ ಖರೀದಿಸಿದರು. ಅದಕ್ಕೆ ಮಾನಸಗಂಗೋತ್ರಿ ಎಂದು ನಾಮಕರಣ ಮಾಡಿದರು. ಈ ರೀತಿ ಕ್ಯಾಂಪಸ್ ಎಲ್ಲಿಯೂ ಇಲ್ಲ. ಗಿಡಮರಗಳ ನಡುವೆ ಪ್ರತಿ ವಿಭಾಗಕ್ಕೂ ಪ್ರತ್ಯೇಕ ಕಟ್ಟಡ, ಗ್ರಂಥಾಲಯ ನಿರ್ಮಾಣ ಮಾಡಲಾಯಿತು. ಇದು ಉತ್ತಮ ಪರಿಕಲ್ಪನೆಯಷ್ಟೇ ಅಲ್ಲ, ಅವರ ದೂರದೃಷ್ಟಿಯ ಫಲ. ಇದರ ಫಲಾನುಭವಿಗಳು ನಾವುಗಳೆಲ್ಲ ಎಂದು ಹೇಳಿದರು.
ಅನ್ವೇಷಣೆ, ಕ್ರಿಯಾತ್ಮಕ ಚಿಂತನೆಯಿಂದ ಮಾತ್ರ ಹೊಸ ರೀತಿ ಸಾಹಿತ್ಯ ಸಾಧ್ಯ. ಕುವೆಂಪು ಸಹ ಸದಾ ಹೊಸತನಕ್ಕೆ ತುಡಿಯುತ್ತಿದ್ದರು. ಇದರಿಂದ ಉತ್ತಮ ಕೃತಿಗಳನ್ನು ರಚಿಸಲು ಕಾರಣವಾಯಿತು. ಕನ್ನಡ ಭಾಷೆ ಮೇಲಿನ ಹಿಡಿತವು ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿತು. ಈಗಿನ ಕಾಲದವರು ನೆಲ-ಜಲ-ಭಾಷೆ ಉಳಿಸಿ ಬೆಳೆಸಲು ಮುಂದಾಗಬೇಕು. ಈ ವಿಷಯದಲ್ಲಿ ಕುವೆಂಪು ಹಾಕಿಕೊಟ್ಟಿರುವ ದಾರಿಯಲ್ಲಿ ನಾವುಗಳೆಲ್ಲ ಸಾಗಬೇಕಿದೆ ಎಂದರು.
ಬದಲಾದ ಕಾಲಮಾನದಲ್ಲಿ ಶಿಕ್ಷಣ ಒಂದೇ ಸಾಲದು. ಅದರೊಂದಿಗೆ ಕೌಶಲ, ಜ್ಞಾನ, ವ್ಯಕ್ತಿತ್ವ ಗುಣವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಇಲ್ಲವಾದರೆ, ಜೀವನದಲ್ಲಿ ಯಶಸ್ಸು ಸಿಗಲ್ಲ. ಉತ್ತಮ ವ್ಯಕ್ತಿಯಾಗಲು ಆಗಲ್ಲ ಎಂದು ಎಚ್ಚರಿಸಿದರು.
ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೆ.ಸಿ.ಶಿವಾರೆಡ್ಡಿ ಮಾತನಾಡಿ, ಮೌಢ್ಯ, ಮೂಢನಂಬಿಕೆ ತುಂಬಿರುವ ಸಮಾಜದ ಸಾಮಾಜಿಕ ರೋಗಗಳ ಕುರಿತು ಯುವ ಜನರು ಅಧ್ಯಯನ ಮಾಡಿ ಪರಿಹಾರ ಸೂಚಿಸಬೇಕಿದೆ.
ಅನಕ್ಷರಸ್ಥರಲ್ಲ, ವಿದ್ಯಾವಂತರೇ ನಿರುದ್ಯೋಗಿಗಳಾಗುತ್ತಿದ್ದಾರೆ. ಶಿಕ್ಷಣದ ವ್ಯಾಖ್ಯಾನವೇ ಉದ್ಯೋಗ ಬರದಂತೆ ಮಾಡುವುದಾಗಿದೆ. ಅಜ್ಞಾನ, ಅಭಿವೃದ್ಧಿಯಾಗದ ಜಗತ್ತನ್ನು ಮುಂದಿನ ಪೀಳಿಗೆಗೆ ನೀಡಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತ್ಯ ಮನರಂಜನೆ ಸರಕು ಅಲ್ಲ, ಅದು ಬದುಕು ಕಟ್ಟಿಕೊಳ್ಳುವ, ವಿವೇಕ ತುಂಬಿ ಮಾನವೀಯತೆ ಬಿತ್ತುತ್ತದೆ. ಈಗಿನ ಸಾಹಿತಿಗಳು ಇಂತಹ ಸಾಹಿತ್ಯ ರಚನೆ ಮಾಡುತ್ತಿಲ್ಲ. ಎಲ್ಲೆಡೆ ಜಾತಿ ಹಣತೆ ಬೆಳಗಲಾಗುತ್ತಿದೆ ಎಂದು ಕಿಡಿಕಾರಿದರು. ಕುವೆಂಪು ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರಾಧ್ಯಾಪಕರಾದ ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರೊ.ಎಸ್.ಡಿ.ಶಶಿಕಲಾ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net