ಸಾವಯವ ಕೃಷಿಯಿಂದ ಉತ್ತಮ ಇಳುವರಿ

ಕಿಸಾನ್ ಸ್ವರಾಜ್ ಸಮ್ಮೇಳನ
ಕಿಸಾನ್ ಸ್ವರಾಜ್ ಸಮ್ಮೇಳನ
Published on

ಪ್ರಮುಖ ಮುಖ್ಯಾಂಶಗಳು

  • ಬಿತ್ತನೆ ಬೀಜ ಸಂರಕ್ಷಕ ಎ.ಎನ್.ಆಂಜನೇಯ ಅಭಿಮತ
  • ಕಿಸಾನ್ ಸ್ವರಾಜ್ ಸಮ್ಮೇಳನ
  • ಬೀಜ ಸಾರ್ವಭೌಮತ್ವದ ಸಂರಕ್ಷಣೆ’ ಕುರಿತು ವಿಚಾರಗೋಷ್ಠಿ
ಮೈಸೂರು: ಸಾವಯವ ಪದ್ಧತಿಯಲ್ಲಿ ದೇಸಿ ಭತ್ತ ತಳಿಗಳಿಂದ ಉತ್ತಮ ಇಳುವರಿ ಪಡೆಯಬಹುದು. ಇದರ ಬಳಕೆಯಿಂದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಪ್ರಗತಿಪರ ರೈತ, ಬಿತ್ತನೆ ಬೀಜ ಸಂರಕ್ಷಕ ಎ.ಎನ್.ಆಂಜನೇಯ ಹೇಳಿದರು.
ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ‘ಬೀಜ ಸಾರ್ವಭೌಮತ್ವದ ಸಂರಕ್ಷಣೆ’ ಕುರಿತು ವಿಚಾರಗೋಷ್ಠಿಯಲ್ಲಿ ‘ರೈತ ತಳಿಗಳಿಗಾಗಿ ಸಮುದಾಯ ಬೀಜ ವ್ಯವಸ್ಥೆ’ ಕುರಿತು ಮಾತನಾಡಿದರು.
ಭತ್ತದ ಬೀಜ ಕಾರ್ಪೋರೇಟ್ ಕಂಪನಿಗಳ ಹಿಡಿತದಲ್ಲಿ ಸಿಲುಕಿಕೊಂಡಿದೆ. ಹೀಗಾಗಿ, ರೈತರು ಆ ಕಂಪನಿಗಳನ್ನು ಅವಲಂಬಿಸಬೇಕಾಗಿದ್ದು, ಅವರು ಕೊಟ್ಟ ಬೀಜವನ್ನೇ ಬಿತ್ತನೆ ಮಾಡಬೇಕಿದೆ. ಆದ್ದರಿಂದ ಸಾವಯವ ಬಿತ್ತನೆ ಬೀಜವನ್ನು ರೈತರು ಸಂಗ್ರಹಿಸಿ, ಅವುಗಳನ್ನು ಪರಸ್ಪರ ಹಂಚಿಕೊಂಡು ಬೆಳೆಯಬೇಕು. ಇದರಿಂದ ಹೈಬ್ರಿಡ್ ಬೀಜಗಳಿಗಿಂತ ಉತ್ತಮ ಇಳುವರಿ ದೊರೆಯುತ್ತದೆ ಎಂದರು.
ರಾಜ್ಯದಲ್ಲಿ 10 ವರ್ಷಗಳ ಹಿಂದೆ 50-60 ಭತ್ತದ ಬಿತ್ತನೆ ಬೀಜ ಸಂರಕ್ಷಕರಿದ್ದರು. ಇದೀಗ ಅವರ ಸಂಖ್ಯೆ ಕಡಿಮೆಯಾಗಿದೆ ಎಂದು ಕಳವಳವ್ಯಕ್ತಪಡಿಸಿದರು.
ನಾವು 250 ಬಗೆಯ ದೇಸಿ ಭತ್ತದ ತಳಿ ಸಂಗ್ರಹಿಸಿದ್ದು, ದೊಡ್ಡ ಭತ್ತ, ಗಂಧಸಾಲೆ, ನವರ, ರಾಜಮುಡಿ, ಕರಿಜಿಡ್ಡು, ಹುಗ್ಗಿ ಭತ್ತ, ಕರಿಮೀಸೆ ಭತ್ತ, ಕ್ಯಾಸಕ್ಕಿ ಭತ್ತ, ಮರಭತ್ತ, ದೊಡಗ್ಯ, ಕರಿಬಾಸುಮತಿ, ಸಿದ್ದಸಣ್ಣ, ರತ್ನಸಾಗರ, ಗಂಧಸಾಲೆ, ಸೇಲಂ ಸಣ್ಣ, ಸಿಂಧೂರ ಮಧುಸಾಲಿ, ರತ್ನಚೂಡ , ಅಂದನೂರು ಸಣ್ಣ ಹೀಗೆ ಬಗೆಬಗೆಯ ಭತ್ತಗಳನ್ನು ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.
ಕೇರಳದ ಭಾರತೀಯ ಸಾವಯ ಕೃಷಿ ಸಂಘದ ಕೆ.ಪಿ.ಇಲಿಯಾಸ್ ಅವರು ಬೀಜ ಸಾರ್ವಭೌಮತ್ವಕ್ಕಾಗಿ ರೂಪಿಸಿರುವ ಆಂದೋಲನ ಕುರಿತು ವಿವರಿಸಿದರು. 
ವಿಜ್ಞಾನಿ ಡಾ.ಕೆ.ವರಪ್ರಸಾದ್ ಅವರು ಸಾಂಪ್ರದಾಯಿಕ ತಳಿಗಳಿಗೆ ಸರ್ಕಾರದಿಂದ ನೆರವು, ಮೈಸೂರಿನ ಸಹಜ ಸಮೃದ್ಧ ಸಂಸ್ಥೆಯ ಜಿ.ಕೃಷ್ಣಪ್ರಸಾದ್ ಅವರು, ದೇಸಿ ಬೀಜ ವೈವಿಧ್ಯವನ್ನು ಪುನರುಜ್ಜೀವನಗೊಳಿಸುವ ಪೂರ್ಣಪ್ರಮಾಣದ ಪ್ರಯತ್ನಗಳ ಕುರಿತು ವಿವರಿಸಿದರು.
ಫೋಟೋ ಇಲ್ಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net