ಮೈಸೂರಿನಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ
ಪದ್ಮಶ್ರೀ ಪುರಸ್ಕೃತ ದಿವಂಗತ ಡಾ.ರಾ.ಸತ್ಯನಾರಾಯಣ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ರಾ.ಸ.ನಂದಕುಮಾರ, ಡಾ.ಅಹಲ್ಯಾ ಶರ್ಮ, ಡಾ.ವಿಜಯ ಶಂಕರ ಶುಕ್ಲಾ, ಶ್ರೀಕೃಷ್ಣದೇವರಾಯ, ಡಾ.ರಾ.ವಿಶ್ವೇಶ್ವರನ್, ಗೋ.ಮಧುಸೂದನ, ಟಿ.ಎಸ್.ಸುಬ್ರಹ್ಮಣ್ಯ ಇತರರು ಇದ್ದರು.
ಮೈಸೂರು:ಪದ್ಮಶ್ರೀ ಪುರಸ್ಕೃತ ದಿವಂಗತ ಡಾ.ರಾ.ಸತ್ಯನಾರಾಯಣ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಶ್ರೀವಿದ್ಯಾಶಾಸ್ತ್ರ ಸೂರೀ ಮತ್ತು ಸಂಸ್ಮರಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬ್ರಹ್ಮವಿದ್ಯಾ ಸಂಸ್ಥೆಯಿಂದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸ್ತ್ರವೇತ್ತರರಾದ ರಾಜೇಶ್ವರ ಶಾಸ್ತ್ರಿ ಜೋಷಿ ಅವರಿಗೆ ಶ್ರೀ ವಿದ್ಯಾಶಾಸ್ತ್ರ ಸೂರೀ ಪ್ರಶಸ್ತಿ ಮತ್ತು ಅಂತಾರಾಷ್ಟ್ರೀಯ ಕಲಾವಿದರಾದ ಡಾ.ವಸುಂಧರಾ ದೊರೆಸ್ವಾಮಿ (ಭರತನಾಟ್ಯ), ಹನೂರು ಅನಂತ ಕೃಷ್ಣ ಶರ್ಮ (ಕರ್ನಾಟಕ ಸಂಗೀತ), ಡಾ.ಗ್ವೀಡೋ ಜ್ಹಾಂಡರೀಗೋ (ಭಾರತೀಯ ಶಾಸ್ತ್ರ) ಅವರಿಗೆ ಸಂಸ್ಮರಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ರಾ.ಸತ್ಯನಾರಾಯಣ ಅವರ ಶ್ರೀವಿದ್ಯಾಷೋಡಶಿಕಾ-ತ್ರಯೀ ಚಿತ್ಕಲಾ ಪಿ.ವಿ.ಕಾಣೆಯವರ ಹಿಸ್ಟರಿ ಆಫ್ ಧರ್ಮಶಾಸ್ತ್ರ ಅನುವಾದಗಳಾದ ಹಿಂದೂ ಧರ್ಮಶಾಸ್ತ್ರಗಳಲ್ಲಿ ವಿವಾಹ ಮತ್ತು ಹಿಂದೂ ಧರ್ಮಶಾಸ್ತ್ರಗಳಲ್ಲಿ ಶ್ರಾದ್ಧ ಕೃತಿಗಳನ್ನು ಡಾ.ರಾ.ಸ.ನಂದಕುಮಾರ ಬಿಡುಗಡೆ ಮಾಡಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಅಹಲ್ಯಾ ಶರ್ಮ, ವಾರಾಣಸಿಯ ಐಜಿಎನ್‌ಸಿಎ ಮಾಜಿ ನಿರ್ದೇಶಕ ಡಾ.ವಿಜಯ ಶಂಕರ ಶುಕ್ಲಾ, ಹಂಪಿ ಆನೆಗೊಂದಿ ಸಂಸ್ಥಾನ ಶ್ರೀಕೃಷ್ಣದೇವರಾಯ, ಡಾ.ರಾ.ವಿಶ್ವೇಶ್ವರನ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಇತರರು ಇದ್ದರು.