ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ : ಕೇಂದ್ರದ ಗಮನ ಸೆಳೆಯಲು ನಿರ್ಧಾರ

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆಯಲ್ಲಿ ಶನಿವಾರ ಸಂಸದರ ಕಚೇರಿಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವಿಚಾರವಾಗಿ ಸಭೆ ನಡೆಯಿತು. ಡಾ.ಪುರುಷೋತ್ತಮ ಬಿಳಿಮಲೆ,  ಪ್ರೊ.ಶೈಲೇಂದ್ರ ಮೋಹನ್,  ಪ್ರೊ. ನೀಲಗಿರಿ ತಳವಾರ್ ಹಾಗೂ ಇತರರು ಇದ್ದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆಯಲ್ಲಿ ಶನಿವಾರ ಸಂಸದರ ಕಚೇರಿಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವಿಚಾರವಾಗಿ ಸಭೆ ನಡೆಯಿತು. ಡಾ.ಪುರುಷೋತ್ತಮ ಬಿಳಿಮಲೆ, ಪ್ರೊ.ಶೈಲೇಂದ್ರ ಮೋಹನ್, ಪ್ರೊ. ನೀಲಗಿರಿ ತಳವಾರ್ ಹಾಗೂ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಯದುವೀರ್ ಅಧ್ಯಕ್ಷತೆಯಲ್ಲಿ ಸಭೆ
  • ಸಿಐಐಎಲ್‌ನಿಂದ ಬೇರ್ಪಡಿಸಲು ನಿರ್ಧಾರ
  • ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲು ಚರ್ಚೆ
ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆಯಲ್ಲಿ ಶನಿವಾರ ಸಂಸದರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತ ಸ್ಥಾನಮಾನ ಹಾಗೂ ಕೇಂದ್ರಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡುವ ವಿಚಾರವಾಗಿ ಸಂಸದರೊ ಂದಿಗೆ ಚರ್ಚೆ ನಡೆಸಿದರು.
ಪ್ರಸ್ತುತ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್)ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಸಿಐಐಎಲ್‌ನಿಂದ ಬೇರ್ಪಡಿಸಿ ಸ್ವಾಯತ್ತತೆ ನೀಡಬೇಕು. ಈ ವಿಚಾರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಡಾ. ಪುರುಷೋತ್ತಮ ಬಿಳಿಮಲೆ ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡಲು ಕೇಂದ್ರ ಸರ್ಕಾರ ಸಿದ್ಧವಿದ್ದು, ಈ ವಿಚಾರವಾಗಿ ನಾವು ಸಾಕಷ್ಟು ಮುಂದೆ ಹೋಗಿದ್ದೇವೆ. ಸಿಐಐಎಲ್‌ನಿಂದ ಕೇಂದ್ರವನ್ನು ಬೇರ್ಪಡಿಸುವ ಮುನ್ನ ಕೇಂದ್ರ ವನ್ನು ಟ್ರಸ್ಟ್ ಅಥವಾ ಬೇರೆ ಯಾವುದೇ ರೂಪದಲ್ಲಾದರೂ ನೋಂದಣಿ ಮಾಡುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ನೋಂದಣಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ನಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸ್ವಾಯತ್ತತೆ ಪಡೆಯೋಣ ಎಂದರು.
ತಮಿಳು ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸ್ವಾಯತ್ತತೆ ಪಡೆಯಲು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ ಹಾಗೂ ತಮಿಳು ಕೇಂದ್ರ ಯಾವ ರೀತಿ ನೋಂದಣಿಯಾಗಿದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಿ. ಅದೇ ರೀತಿ ನಮ್ಮಲ್ಲೂ ನೋಂದಣಿ ಪ್ರಕ್ರಿಯೆ ಆಗಬೇಕು. ಈ ವಿಚಾರವಾಗಿ ನಾನು ಸಹ ಕೇಂದ್ರ ಸರ್ಕಾರದಿಂದ ಾಹಿತಿ ಪಡೆಯುತ್ತೇನೆ ಎಂದು ಹೇಳಿದರು.
ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಮೈಸೂರು ವಿಶ್ವವಿದ್ಯಾಲಯ 4.02 ಎಕರೆ ಜಾಗವನ್ನು ಮಂಜೂರು ಮಾಡಲು ಒಪ್ಪಿಗೆ ಸೂಚಿಸಿದೆ. ಈ ಜಾಗವನ್ನು ಸಿಐಐಎಲ್ ಹೆಸರಿಗೆ ನೋಂದಾಯಿಸುವ ಅವಶ್ಯಕತೆ ಇಲ್ಲ. ಸಿಐಐಎಲ್‌ನಿಂದ ಕೇಂದ್ರವನ್ನು ಬೇರ್ಪಡಿಸುವ ಆಲೋಚನೆ ಇರುವಾಗ ಮತ್ತೆ ಸಿಐಐಎಲ್ ಹೆಸರಿನಲ್ಲಿ ಜಾಗ ನೋಂದಣಿ ಮಾಡಿಸುವುದು ಸರಿಯಲ್ಲ. ಹಾಗಾಗಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಹೆಸರಿನಲ್ಲಿ ನೋಂದಣಿ ಮಾಡಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.
ಈ ಹಿಂದೆ ಮಾನಸಗಂಗೋತ್ರಿಯ ಜಯಲಕ್ಷ್ಮೀ ವಿಲಾಸ ಅರಮನೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಆ ಅರಮನೆಯಲ್ಲಿ ಜಾನಪದ ವಸ್ತು ಸಂಗ್ರಹಾಲಯ ಕಾರ್ಯನಿರ್ವಹಿಸುತ್ತಿದ್ದು, ಆ ಕಟ್ಟಡವನ್ನು ಕೇಂದ್ರದ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುವುದು ಬೇಡ ಎಂದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಕಟ್ಟಡ ಮೈಸೂರಿನಲ್ಲಿಯೇ ನಿರ್ಮಾಣಗೊಳ್ಳಲಿದೆ. ಯಾವುದೇ ಕಾರಣಕ್ಕೂ ಈ ಕೇಂದ್ರವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಅವಕಾಶ ನೀಡುವುದಿಲ್ಲ. ಕೇಂದ್ರಕ್ಕೆ ಸ್ವಾಯತ್ತತೆ ದೊರೆತ ನಂತರ ಕೇಂದ್ರದಿಂದ ಹೆಚ್ಚಿನ ಅನುದಾನ ದೊರೆಯಲಿದೆ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಟಿ.ಗುರುರಾಜ್ ಮಾತನಾಡಿ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಸಿಐಐಎಲ್‌ನಿಂದ ಬೇರ್ಪಡಿಸುವುದು ಹಾಗೂ ಕೇಂದ್ರವನ್ನು ಟ್ರಸ್ಟ್ ಅಥವಾ ಬೇರೆ ಯಾವುದೇ ರೂಪದಲ್ಲಾದರೂ ನೋಂದಣಿ ಮಾಡುವ ವಿಚಾರದ ಕುರಿತು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ತಜ್ಞರ ಸಮಿತಿ ರಚಿಸುವುದು ಸೂಕ್ತ ಎಂದರು. ಈ ಕುರಿತು ಪ್ರತಿಕ್ರಿಯಿಸಿಸದ ಸಂಸದ ಯದುವೀರ್, ಈ ಬಗ್ಗೆ ಅಗತ್ಯ ಕ್ರಮ ವಹಿಸುವುದು ಉತ್ತಮ ಎಂದರು.
ಸಭೆಯಲ್ಲಿ ಭಾರತೀಯ ಭಾಷಾ ಸಂಸ್ಥಾನ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ನೀಲಗಿರಿ ತಳವಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಶಾಸ್ತ್ರೀಯ ಭಾಷಾ ಕನ್ನಡ ಹೋರಾಟ ಸಮಿತಿ ಸದಸ್ಯರಾದ ಯಮುನಾ, ಸವಿತಾ ಮಲ್ಲೇಶ್, ಇತಿಹಾಸತಜ್ಞ ಪ್ರೊ.ನಂಜರಾಜೇ ಅರಸ್, ಕನ್ನಡಪರ ಹೋರಾಟಗಾರ ಅರವಿಂದ್ ಶರ್ಮ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net