ಮೂಗೂರು: ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಶ್ರೀಕ್ಷೇತ್ರ ತ್ರಿಪುರ ಸುಂದರ ಅಮ್ಮನವರ ಸನ್ನಿಧಿಯಲ್ಲಿ ಜುಲೈ 17ರಿಂದ ಆಷಾಢ ಶುಕ್ರವಾರದ ಪೂಜೋತ್ಸವ ಅದ್ದೂರಿಯಾಗಿ ಜರುಗಲಿದೆ.
ಜುಲೈ 24, 31 ಹಾಗೂ ಆ.7ರ ಶುಕ್ರವಾರ ಮಾತ್ರವಲ್ಲದೆ ಇತರ ದಿನಗಳಲ್ಲಿಯೂ ಸೇವಾರ್ಥದಾರರಿಂದ ವಿಶೇಷ ಪೂಜೆ ಜರುಗಲಿದ್ದು, ಗ್ರಾಮದಲ್ಲಿ ಅಮ್ಮನವರ ಚಿಕ್ಕ ಜಾತ್ರೆಯೇ ಏರ್ಪಡಲಿದೆ.
ಪ್ರತಿ ವರ್ಷದ ಆಷಾಢ ಮಾಸದಲ್ಲಿ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಹೂವಿನ ಸೀರೆ ಅಲಂಕಾರದ ವಿಶೇಷ ಪೂಜೆಗೆ ಸಹಸ್ರಾರು ಭಕ್ತರು ಆಗಮಿಸುವರು. ಅಮ್ಮನವರ ದರ್ಶನ ಪಡೆದು ಪೂಜೆ ಸಲ್ಲಿಸುವುದು ಆಷಾಢ ಮಾಸದ ವಿಶೇಷವಾಗಿದೆ.
ಸಕಲ ಸಿದ್ಧತೆ:
ಅಮ್ಮನವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ವಾಹನ ನಿಲುಗಡೆಗೆ ಸ್ಥಳ ಗುರುತಿಸಲಾಗಿದ್ದು, ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ತಾತ್ಕಾಲಿಕ ಶೌಚಗೃಹ ವ್ಯವಸ್ಥೆಯಾಗಲಿ:
ಮಕ್ಕಳು ಸೇರಿದಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ತಾತ್ಕಾಲಿಕ ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ಸುಲಲಿತವಾಗಿ ದರ್ಶನ ಮಾಡಲು ಅಗತ್ಯವಿರುವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿದೆ. ಅಲ್ಲದೆ ಸಂಗ್ರಹವಾದ ಕಾಣಿಕೆ ನಿರ್ವಹಣೆಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಮೇಲುಸ್ತುವಾರಿ ವಹಿಸಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.