ಪ್ರಯೋಗದ ಮುಖೇನ ಜ್ಞಾನವನ್ನು ಒರೆಗೆ ಹಚ್ಚಿ:ಡಾ.ಕೆ.ಎಸ್.ಸದಾನಂದ ಸಲಹೆ

 ಡಾ.ಕೆ.ಎಸ್.ಸದಾನಂದ
ಡಾ.ಕೆ.ಎಸ್.ಸದಾನಂದ
Published on

ಪ್ರಮುಖ ಮುಖ್ಯಾಂಶಗಳು

  • ಕ್ಲಿನಿಕಲ್ ಪ್ರಯೋಗಗಳಲ್ಲಿ ನೈತಿಕ ಮೌಲ್ಯಗಳನ್ನು ಪಾಲಿಸುವುದು ಅತ್ಯಗತ್ಯ
  • ವೈದ್ಯಕೀಯ ಸಂಶೋಧನೆಗಳ ಮುಖ್ಯ ಉದ್ದೇಶ ಜನರ ಜೀವನಮಟ್ಟ ಸುಧಾರಣೆ ಹಾಗೂ ಅವರ ನೋವು ಉಪಶಮನ ಮಾಡುವುದು ಅಗಿರಬೇಕು
ಮೈಸೂರು:ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ನಮ್ಮಲ್ಲಿನ ಜ್ಞಾನವನ್ನು ಪ್ರಯೋಗಗಳ ಮೂಲಕ ಒರೆಗೆ ಹಚ್ಚಬೇಕು. ಆಗ ಮಾತ್ರ ಸಮಾಜಕ್ಕೆ ಒಳಿತಾಗುವ ಸಂಶೋಧನೆಗಳು ಸಾಧ್ಯ ಎಂದು ನಗರದ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಹೇಳಿದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಭಾರತೀಯ ಕ್ಲಿನಿಕಲ್ ಪ್ರಯೋಗಗಳ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕ್ಲಿನಿಕಲ್ ಪ್ರಯೋಗಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಲಿನಿಕಲ್ ಪ್ರಯೋಗಗಳಲ್ಲಿ ನೈತಿಕ ಮೌಲ್ಯಗಳನ್ನು ಪಾಲಿಸುವುದು ಅತ್ಯಗತ್ಯ. ಪ್ರಯೋಗದಲ್ಲಿ ಭಾಗಿಯಾಗುವ ಎಲ್ಲರಿಗೂ ಉದ್ದೇಶದ ಅರಿವು, ಪರಸ್ಪರ ನಂಬಿಕೆ ಇರಬೇಕು. ರೋಗಿಯ ಸಮ್ಮತಿ, ಆತನ ಹಕ್ಕುಗಳ ರಕ್ಷಣೆಗೆ ಎಲ್ಲರೂ ಕಾಳಜಿ ವಹಿಸಬೇಕು. ಸಂಶೋಧನೆ ಸಮಾಜ ಪರವಾಗಿರಬೇಕು ಎಂದರು.
ವೈದ್ಯಕೀಯ ಸಂಶೋಧನೆಗಳ ಮುಖ್ಯ ಉದ್ದೇಶ ಜನರ ಜೀವನಮಟ್ಟ ಸುಧಾರಣೆ ಹಾಗೂ ಅವರ ನೋವು ಉಪಶಮನ ಮಾಡುವುದೇ ಆಗಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ನಮ್ಮಲ್ಲಿನ ಜ್ಞಾನವನ್ನು ಪ್ರಯೋಗಗಳ ಮೂಲಕ ಒರೆಗೆ ಹಚ್ಚಬೇಕು. ಆಗ ಮಾತ್ರ ಸಮಾಜಕ್ಕೆ ಒಳಿತಾಗುವ ಸಂಶೋಧನೆಗಳು ಸಾಧ್ಯ. ತಜ್ಞರು ಇದನ್ನು ಪ್ರತ್ಯೇಕ ಹೊರೆ ಎಂದು ಭಾವಿಸದೇ ಆರೋಗ್ಯ ರಕ್ಷಣೆಯ ಭಾಗವಾಗಿ ನೋಡಬೇಕು ಎಂದು ಸಲಹೆ ನೀಡಿದರು.
ಜೆಎಸ್‌ಎಸ್ ಆಸ್ಪತ್ರೆ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಸುನೀಲ್ಕುಮಾರ್, ಯು.ವಿ. ರಿಸರ್ಚ್ ಸಂಸ್ಥೆಯ ಸಿಒಒ ಸಂಜಯ್ ಕಬ್ರಾ, ಬಯೊಟೆಕ್ ಫಾರ್ಮಾಸುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಸಂಸ್ಥೆಯ ಸಲಹೆಗಾರ್ತಿ ಲಕ್ಷ್ಮೀ ಅಚ್ಯುತ ಅವರು ವಿವಿಧ ವಿಷಯಗಳನ್ನು ಮಂಡಿಸಿದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಡೀನ್ ಡಾ.ಪ್ರಶಾಂತ್ ಎಂ.ವಿಶ್ವನಾಥನ್ ಮಾತನಾಡಿ, ಔಷಧ ಕ್ಷೇತ್ರದಲ್ಲಿ ಭಾರತವು ಪಾರಮ್ಯ ಸಾಧಿಸಲು ಕ್ಲಿನಿಕಲ್ ಪ್ರಯೋಗಗಳು ಹೆಚ್ಚಬೇಕು. ಆಗ ಮಾತ್ರ ನೂತನ ಔಷಧಗಳು ದೊರೆಯುತ್ತವೆ. ಜನರ ಆರೋಗ್ಯವೂ ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು.
ದೇಶದಲ್ಲಿ ಶೇ. 2ರಷ್ಟು ಮಾತ್ರ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಇದು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ತುಂಬ ಕಡಿಮೆ. ಫಾರ್ಮಾ ಉತ್ಪನ್ನಗಳು ಹಾಗೂ ರಫ್ತಿನಲ್ಲಿ ನಾವು ಪ್ರಬಲವಾಗಿದ್ದರೂ, ಸಂಶೋಧನೆಯಲ್ಲಿ ಹಿಂದಿದ್ದೇವೆ. ಸಂಶೋಧನೆ ಮತ್ತು ಕ್ಲಿನಿಕಲ್ ಪ್ರಯೋಗಗಳು ಒಂದಕ್ಕೊಂದು ಪೂರಕ. ಹಾಗಾಗಿ ಸಂಶೋಧನೆ, ಕ್ಲಿನಿಕಲ್ ಪ್ರಯೋಗ ಹೆಚ್ಚಾಗಬೇಕು ಎಂದರು.
ಆಯುಷ್ ಇಲಾಖೆ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಅಕ್ಷಯಸಾರಥಿ ಹೆಲ್ತ್ ಸಲ್ಯುಷನ್ಸ್ ಸಂಸ್ಥೆಯ ನಂಜರಾಜೇ ಎಸ್.ಅರಸ್, ಮೈಸೂರು ವಿಶ್ವವಿದ್ಯಾಲಯ ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥೆ ಮಾಲಿನಿ ರಾವ್, ಸಂಚಾಲಕ ಡಾ.ಸಿ.ಜೆ.ದೇವರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net