ಹವ್ಯಾಸಿ ಕಲಾವಿದರಿಗೆ ಪ್ರೋತ್ಸಾಹ, ಆರ್ಥಿಕ ನೆರವು ಸಿಗುತ್ತಿಲ್ಲ

ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಏಕವ್ಯಕ್ತಿ ನಾಟಕೋತ್ಸವವನ್ನು ಚಿಂತಕ ನಾ.ದಿವಾಕರ್ ಉದ್ಘಾಟಿಸಿದರು. ಎನ್.ಎಸ್.ಗೋಪಿನಾಥ್, ಡಾ.ಸುಜಾತಾ ಅಕ್ಕಿ ಇತರರಿದ್ದರು
ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಏಕವ್ಯಕ್ತಿ ನಾಟಕೋತ್ಸವವನ್ನು ಚಿಂತಕ ನಾ.ದಿವಾಕರ್ ಉದ್ಘಾಟಿಸಿದರು. ಎನ್.ಎಸ್.ಗೋಪಿನಾಥ್, ಡಾ.ಸುಜಾತಾ ಅಕ್ಕಿ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ರಂಗಕರ್ಮಿ ಎನ್.ಎಸ್.ಗೋಪಿನಾಥ್ ಅಭಿಪ್ರಾಯ
  • ಹವ್ಯಾಸಿ ಕಲಾವಿದರಿಗೆ ಆರ್ಥಿಕ ನೆರವು ಅಗತ್ಯ
ಮೈಸೂರು: ಹವ್ಯಾಸಿ ಕಲಾವಿದರು ಸಾಂಸ್ಕೃತಿಕ ರಾಯಭಾರಿಗಳು. ಆದರೆ, ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಆರ್ಥಿಕ ನೆರವು ದೊರೆಯುತ್ತಿಲ್ಲ ಎಂದು ಹಿರಿಯ ರಂಗಕರ್ಮಿ ಎನ್.ಎಸ್.ಗೋಪಿನಾಥ್ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಏಕೀಕರಣ ಹೋರಾಟಗಾರ ಡಾ.ಸಿದ್ದನಾಥ ಬಳ್ಳಾರಿ ಸ್ಮರಣಾರ್ಥವಾಗಿ ಕರ್ನಾಟಕ ಏಕೀಕರಣ ಟ್ರಸ್ಟ್ ವತಿಯಿಂದ ನಗರದ ಕಿರುರಂಗಮಂದಿರದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಡಾ.ಸುಜಾತಾ ಅಕ್ಕಿಯವರ ಮೂರು ಏಕವ್ಯಕ್ತಿ ನಾಟಕಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಕಲೆಗೆ ಹವ್ಯಾಸಿ ಕಲಾವಿದರ ಕೊಡುಗೆ ಹೆಚ್ಚಿದ್ದು, ವಿವಿಧ ಕಾಲೇಜು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ 45 ದಿನಗಳ ರಂಗ ತಾಲೀಮು ನೀಡಿ ಅವರನ್ನು ಕಲಾವಿದರಾಗಿ ರೂಪಿಸುತ್ತಾರೆ. ಇದು ರಂಗಭೂಮಿಗೆ ಯುವ ಜನರ ಒಳಗೊಳ್ಳುವಿಕೆ. ಇದರೊಂದಿಗೆ ಹೊಸ ಚೈತನ್ಯ ತುಂಬುತ್ತಾರೆ. ಆದರೆ, ಅಂತಹ ಹವ್ಯಾಸಿ ಕಲಾವಿದರನ್ನು ನಿರ್ಲಕ್ಷೃ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಂಗಚಟುವಟಿಕೆಗಳು ಕಡಿಮೆಯಾಗುತ್ತಿವೆ. ಆರ್ಥಿಕ ಶಕ್ತಿ ಕೊರತೆಯಿಂದ ನಾಟಕ ಪ್ರದರ್ಶನ ಆಯೋಜನೆಯೂ ಕಷ್ಟಕರವಾಗುತ್ತಿದೆ. ರಂಗಭೂಮಿಗೆ ಸಂಬಂಧಿಸಿದ ಸಂಘಟನೆಗಳು ಸಹ ನಿಷ್ಕ್ರಿಯವಾಗುತ್ತಿವೆ. ಮತ್ತೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಕಲಾವಿದರನ್ನು ನಿರ್ಲಕ್ಷಿೃಸುತ್ತಿದೆ ಎಂದು ದೂರಿದರು.
ರಂಗಕಲೆಯ ಸಂಘಟನೆಗಳ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ನಾಟಕ ನೋಡಲು ಪ್ರೇಕ್ಷಕರು ಬರುತ್ತಿಲ್ಲ. ಟಿಕೆಟ್‌ನಿಂದಲೂ ವರಮಾನ ಬರುತ್ತಿಲ್ಲ. ಹೀಗಾದರೆ, ನಾಟಕ ಪ್ರದರ್ಶನ ಮಾಡುವುದು ಹೇಗೆ? ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ದೊರೆಯುವ ಅನುದಾನವನ್ನು 25,000 ದಿಂದ 50,000 ರೂಪಾಯಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಮೈಸೂರಿನಲ್ಲಿ ಬಹಳಷ್ಟು ನಾಟಕೋತ್ಸವಗಳು ನಡೆದಿವೆ. ಆದರೆ, ಏಕವ್ಯಕ್ತಿ ನಾಟಕೋತ್ಸವವಾಗಿಲ್ಲ. ಇದೀಗ ಚಾಲನೆ ನೀಡುತ್ತಿರುವ ಇದು ಮೊದಲ ಏಕವ್ಯಕ್ತಿ ನಾಟಕೋತ್ಸವ ಎಂದರು. 
ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಡಾ.ಸಿದ್ದನಾಥ ಬಳ್ಳಾರಿಯಂತಹ ಹೋರಾಟಗಾರರ ಕುರಿತು ಯಾರೂ ಸ್ಮರಣೆ ಮಾಡುತ್ತಿಲ್ಲ. ಅವರ ಕಾಳಜಿಯೂ ಇಲ್ಲವಾಗಿದೆ. ಅವರ ಕುರಿತು ತಿಳಿದುಕೊಳ್ಳಲು ಯಾರೂ ಪ್ರಯತ್ನಿಸಿಲ್ಲ. ಆದರೆ, ಡಾ.ಸುಜಾತಾ ಅಕ್ಕಿ ಅವರು ಇಂತಹ ಹೋರಾಟಗಾರರ ಕುರಿತು ನಾಟಕದ ರೂಪಕ್ಕೆ ತಂದು ಯುವ ಜನರಿಗೆ ಪರಿಚಯಿಸುತ್ತಿದ್ದಾರೆ ಎಂದು ಹೇಳಿದರು.
ಚಿಂತಕ ನಾ.ದಿವಾಕರ್ ಮಾತನಾಡಿ, ಕರ್ನಾಟಕ ಏಕೀಕರಣದಲ್ಲಿ ಮುಂಚೂಣಿಯಲ್ಲಿದ್ದ ಕೆಲ ಖ್ಯಾತನಾಮರ ಹೆಸರು ಬಿಟ್ಟರೆ ಉಳಿದವರ ಹೆಸರು ತಿಳಿದಿಲ್ಲ. ಜತೆಗೆ, ಅವರ ಕುರಿತು ಹೆಚ್ಚಿನ ವಿವರವೂ ಗೊತ್ತಿಲ್ಲ. ಹೀಗಾಗಿ, ಈಗಿನ ಯುವ ಜನರಿಗೆ ಈ ಮಹನೀಯ ಕುರಿತು ತಿಳಿಸಿಕೊಡಬೇಕಿದೆ ಎಂದರು. ನಾಟಕ ರಚನಾಗಾರ್ತಿ ಡಾ.ಸುಜಾತಾ ಅಕ್ಕಿ ಇದ್ದರು.
ಬಳಿಕ ಹರಿಣಾಕ್ಷಿ ರಾವ್ ಅಭಿಯನದ ಅಹಲ್ಯೆ ಏಕವ್ಯಕ್ತಿ ನಾಟಕ ಪ್ರದರ್ಶನಗೊಂಡಿತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net