ಕೆ.ಆರ್.ನಗರ : ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾದ ಕೆಸ್ತೂರು ಗೇಟ್‌ನಿಂದ ತಾಲೂಕಿನ ಗಡಿ ಗ್ರಾಮ ಮಾದಹಳ್ಳಿವರೆಗೆ 15 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಚಾಮರಾಜ ಬಲದಂಡೆ ನಾಲೆಯ 14ನೇ ಬ್ರಾೃಂಚ್‌ನಲ್ಲಿ 15 ಕೋಟಿ ರೂ. ವೆಚ್ಚದ ಅಕ್ವಾಡಕ್ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಾಲೆ ನಿರ್ಮಾಣದ ಸಮಯದಲ್ಲಿ 180 ವರ್ಷಗಳ ಹಿಂದೆ ಅಕ್ವಾಡಕ್ ನಿರ್ಮಾಣ ಮಾಡಿದ್ದು ಈಗಾಗಲೇ ಶಿಥಿಲಗೊಂಡು ನೀರಿನ ಹರಿವಿಗೆ ತೊಂದರೆಯಾಗಿದೆ. ಇದರಿಂದಾಗಿ ನಾಲೆಯ ಕೊನೆಯ ಹಂತದ ಜಮೀನಿಗೆ ನೀರಿನ ಕೊರತೆ ಉಂಟಾಗುತ್ತಿದೆ. ಇದನ್ನು ಗಮನಿಸಿ ಕಾಮಗಾರಿಗೆ ಅನುದಾನ ಕೋರಲಾಗಿತ್ತು. ಅದರಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು ಐದು ಜನ ರೈತರ ಜಮೀನು ಸ್ವಾಧೀನಕ್ಕಾಗಿ ಬೇಕಿದ್ದು ಅವರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನ ದೆಗ್ಗನಹಳ್ಳಿ, ಸೌತನಹಳ್ಳಿ ಸೇರಿದಂತೆ ಇತರ ನಾಲೆಯ ಕೊನೆ ಹಂತದ ಗ್ರಾಮಗಳ ರೈತರ ಜಮೀನಿಗೆ ಸರಾಗವಾಗಿ ನೀರು ಹರಿಸಬೇಕೆಂಬ ಉದ್ದೇಶದಿಂದ ಈಗಾಗಲೇ ಕೆಗ್ಗೆರೆ ಬಳಿ 400 ಕೋಟಿ ರೂ. ವೆಚ್ಚದಲ್ಲಿ ನಾಲೆ ಆಧುನೀಕರಣ ಕಾಮಗಾರಿ ಆರಂಭಿಸಲಾಗಿದೆ. ಹಾರಂಗಿ ನಾಲೆಗಳ ಆಧುನೀಕರಣ ಮಾಡಲು 108 ಕೋಟಿ ರೂ. ಅನುದಾನ ಮಂಜೂರು ಮಾಡಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ನಾಲೆಗಳ ನಿರ್ವಹಣೆಗಾಗಿ ನೀರಾವರಿ ಇಲಾಖೆ ವರ್ಷಕ್ಕೊಮ್ಮೆ ನೀಡುತ್ತಿರುವ 1 ಕೋಟಿ ರೂ. ಅನುದಾನ ನೀಡುತ್ತಿದ್ದು ಇದರಿಂದ ರೈತರು ಹೇಳುವ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಕನಿಷ್ಠ 10 ಕೋಟಿ ರೂ.ಗಳನ್ನು ನೀಡುವಂತೆ ಸದನದಲ್ಲಿ ಚರ್ಚಿಸಿ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಇಲಾಖೆಯ ಇಂಜಿನಿಯರ್‌ಗಳು ಅನುದಾನದ ಅವಶ್ಯಕತೆ ಇದ್ದಲ್ಲಿ ಅಂದಾಜು ಪಟ್ಟಿ ತಯಾರಿಸಿ ನನಗೆ ನೀಡಿ ಎಂದು ಹೇಳಿದರು.
ನೀರಾವರಿ ಇಲಾಖೆ ಇಇ ಕುಶುಕುಮಾರ್, ಎಇಇ ಅಯಾಜ್ ಪಾಷಾ, ಎಇ ಕಿರಣ್, ಕಬ್ಬು ಬೆಳೆಗಾರರ ಸಂಘದ ಅಂಕನಹಳ್ಳಿ ತಿಮ್ಮಪ್ಪ, ಮುಖಂಡರಾದ ಜವರೇಗೌಡ, ಧನರಾಜ್, ಕೀರ್ತಿಶೇಷ, ಪುಟ್ಟರಾಜು, ಕೆ.ಮಹದೇವ್, ನಟರಾಜ್, ತಿರ್ಥೇಶ, ಜಗದೀಶ್, ರಮೇಶ್, ಗುರುರಾಜ್, ಬಸವರಾಜು ಹಾಜರಿದ್ದರು.