ಮೋದಿ ಉದ್ಘಾಟಿಸಲಿರುವ ವಿವೇಕ ಸ್ಮಾರಕ ಬಳಿ ತಲ್ವಾರ್ ಹಿಡಿದು ಓಡಾಡಿದ ಯುವಕ
ವಿವೇಕ ಸ್ಮಾರಕ
Published on:
Copied
Follow Us
ಮೈಸೂರು: ನಗರದ ಎನ್‌ಎಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿ ರುವ ವಿವೇಕ ಸ್ಮಾರಕವನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಈ ನಡುವೆಯೇ ಸ್ಮಾರಕದ ಸಮೀಪ ಯುವಕನೊಬ್ಬ ತಲ್ವಾರ್ ಹಿಡಿದು ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ.
ತಲ್ವಾರ್ ಹಿಡಿದು ಬಂದಿದ್ದ ಯುವಕ ತನ್ನ ಪರಿಚಯದ ಕೆಲವರೊಂದಿಗೆ ವಾಗ್ವಾದ ನಡೆಸುತ್ತಿರುವುದು ಸ್ಥಳದಲ್ಲಿದ್ದವರ ಗಮನಕ್ಕೆ ಬಂದಿದೆ. ಆತ ಯಾವ ಉದ್ದೇಶದಿಂದ ತಲ್ವಾರ್ ಹಿಡಿದು ಸಾರ್ವಜನಿಕ ಸ್ಥಳಕ್ಕೆ ಬಂದಿದ್ದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವೇಕ ಸ್ಮಾರಕದ ಸುತ್ತಮುತ್ತ ಕಠಿಣ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದರೂ, ಯುವಕ ತಲ್ವಾರ್ ಹಿಡಿದು ಅಲ್ಲಿಗೆ ಬಂದಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಬೈಕ್ ಕಳವು: ನಗರದ ನಜರ್‌ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಎಂ. ರಸ್ತೆಯ ಸಂದೇಶ್ ಪ್ರಿನ್ಸ್ ಹೋಟೆಲ್ ಮುಂಭಾಗ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವನ್ನು ಕಳ್ಳರು ಕಳವು ಮಾಡಿದ್ದಾರೆ.
ನಿವೃತ್ತ ಸರ್ಕಾರಿ ನೌಕರ ಎನ್. ಬಸವರಾಜು ನೀಡಿದ ದೂರಿನ ಪ್ರಕಾರ, 2014ರಲ್ಲಿ ಖರೀದಿಸಿದ್ದ ತಮ್ಮ ನೀಲಿ ಬಣ್ಣದ ಹೀರೋ ಸ್ಪ್ಲೆಂಡರ್ ಪ್ರೋ ದ್ವಿಚಕ್ರ ವಾಹನವನ್ನು ಜೂ.9ರಂದು ಬೆಳಗ್ಗೆ ಸಂದೇಶ್ ಪ್ರಿನ್ಸ್ ಹೋಟೆಲ್ ಮುಂಭಾಗ ನಿಲ್ಲಿಸಿ ವೈಯಕ್ತಿಕ ಕೆಲಸದ ನಿಮಿತ್ತ ಮಳವಳ್ಳಿಗೆ ತೆರಳಿದ್ದರು. ಸಂಜೆ ಬಂದು ನೋಡಿದಾಗ ವಾಹನ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ.
ಬಳಿಕ ಸುತ್ತಮುತ್ತಲಿನ ರಸ್ತೆ, ಅಂಗಡಿ ಮುಂಗಟ್ಟುಗಳು ಹಾಗೂ ಸಂಚಾರ ಪೊಲೀಸ್ ಠಾಣೆಗಳಲ್ಲಿ ವಾಹನಕ್ಕಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೆಲಸದ ಒತ್ತಡದಿಂದ ಕೂಡಲೇ ದೂರು ನೀಡಲು ಸಾಧ್ಯವಾಗದೆ, ಜು.29ರಂದು ನಜರ್‌ಬಾದ್ ಪೊಲೀಸ್ ಠಾಣೆಗೆ ತಡವಾಗಿ ದೂರು ಸಲ್ಲಿಸಿದ್ದಾರೆ.