ಮೈಸೂರು ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕವಿ- ಕಾವ್ಯ ಸಮ್ಮೇಳನದಲ್ಲಿ ಡಾ.ಬಿ. ಪ್ರಹ್ಲಾದರೆಡ್ಡಿ, ನಾಗರಾಜ ವಿ. ಬೈರಿ, ಶ್ರೀ ಆರೂಢ ಭಾರತೀ ಸ್ವಾಮೀಜಿ, ಟಿ.ತ್ಯಾಗರಾಜ್, ಬಿ.ಎಸ್.ಮಂಜುನಾಥ್ ಇನ್ನಿತರರಿದ್ದರು.
ಕವಿಯ ಅನುಭವವನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಹೇಳುವುದೇ ಪದ್ಯ
ಮೈಸೂರು: ಕವಿಯ ಅನುಭವವನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಹೇಳುವುದೇ ಪದ್ಯ ಎಂದು ಮೈಸೂರು ಕವಿ- ಕಾವ್ಯ ಸಮ್ಮೇಳನಾಧ್ಯಕ್ಷ, ಬೆಂಗಳೂರಿನ ರಮಣಶ್ರೀ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಕನ್ನಡ ಪ್ರಾಧ್ಯಾಪಕ ಡಾ.ಬಿ. ಪ್ರಹ್ಲಾದರೆಡ್ಡಿ ಹೇಳಿದರು.
ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಕವಿ-ಕಾವ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಪದ್ಯ ಎಲ್ಲವನ್ನು ಬಿಚ್ಚಿಡುವಂತಹದ್ದಲ್ಲ. ಸೂಕ್ಷ್ಮವಾಗಿ ಹೇಳುವಂಥದ್ದು. ಹೀಗಾಗಿ ಕವಿ ಹೇಳಬೇಕಾದ್ದನ್ನು ಸೂಕ್ಷ್ಮವಾಗಿ ಹೇಳುತ್ತಾನೆ. ಕಾವ್ಯ ಎಂಬುದು ಭಾವನೆಗಳ ಪರಾಕಾಷ್ಠೆ ಎಂದರು. ಇದಕ್ಕೆ ಅವರು ಎಚ್.ಡುಂಡಿರಾಜ್ ಅವರ ‘ಮಾರ್ಕೆಟ್‌ನಲ್ಲಿ ಸಿಕ್ಕಳು, ನನ್ನ ನೋಡಿ ನಕ್ಕಳು, ನಮಗಿಬ್ಬರು ಮಕ್ಕಳು’ ಎಂಬುದನ್ನು ನಿದರ್ಶನವಾಗಿ ಹೇಳಿದರು.
ರಾಮಾಯಣ ಕಥೆ ಹೇಳುವುದು ಎಂದರೆ ತಲೆನೋವು. ಒಂದೂರಿನಲ್ಲಿ ಒಬ್ಬಳು ಅಜ್ಜಿ ಇದ್ದಳು. ಅವಳು ಪೂರ್ಣ ರಾಮಾಯಣ ಕಥೆ ಹೇಳಿದವರಿಗೆ ಮಜ್ಜಿಗೆ ಕೊಡುವುದಾಗಿ ಹೇಳಿದ್ದಳು.
ಆಕೆಯ ಬಳಿ ಯಾರೂ ಮಜ್ಜಿಗೆ ಪಡೆಯಲು ಆಗಿರಲಿಲ್ಲ. ಆದರೆ ಬಾಲಕಿಯೊಬ್ಬಳು ಹೋಗಿ, ದಶರಥನ ಕಂದ, ರಾವಣನನ್ನು ಕೊಂದ. ಸೀತೆಯನ್ನು ವಾಪಸ್ ಕರೆತಂದ ಎಂದು ಹೇಳಿ, ರಾಮಾಯಣ ಕಥೆ ಮುಗಿಯಿತೆಂದು ಮಜ್ಜಿಗೆ ಗಿಟ್ಟಿಸಿದಳು ಎಂಬ ಸ್ವಾರಸ್ಯಕರ ಮಾತುಗಳ ಮೂಲಕ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ರಾಜ್ಯ ಸರ್ಕಾರವು ಪ್ರಸ್ತುತ ಪುಸ್ತಕ ಸಂಸ್ಕೃತಿಗೆ ಉತ್ತೇಜನ ನೀಡದಿದ್ದಲ್ಲಿ ಭವಿಷ್ಯದಲ್ಲಿ ಪೊಲೀಸ್ ಇಲಾಖೆಗೆ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮೂಲಕ ಪುಸ್ತಕಗಳ ಸಗಟು ಖರೀದಿಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಕೂಡಲೇ ಇದನ್ನು ಪುನಾರಂಭಿಸಬೇಕು ಎಂದು ಆಗ್ರಹಿಸಿದರು.
ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಸಿದರೆ ಯುವಜನತೆ ಆ ಕಡೆ ಗಮನಹರಿಸುತ್ತಾರೆ. ಇಲ್ಲದಿದ್ದಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ದಾರಿ ತಪ್ಪುತ್ತಿರುವವರು ಮತ್ತಷ್ಟು ಅವನತಿಯ ಕಡೆಗೆ ಸಾಗುತ್ತಾರೆ. ಇದರಿಂದ ಅಪರಾಧ ಕೃತ್ಯಗಳು ಹೆಚ್ಚಾಗಿ, ನಿಯಂತ್ರಣಕ್ಕೆ ಹೆಚ್ಚು ಪೊಲೀಸರನ್ನು ನೇಮಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೊದಲೆಲ್ಲಾ ಮಕ್ಕಳಿಗೆ ನೈತಿಕ ಶಿಕ್ಷಣ ಕಲಿಸಲಾಗುತ್ತಿತ್ತು. ಈಗ ಅದು ಇಲ್ಲವೇ ಇಲ್ಲ. ಆದ್ದರಿಂದ ಪ್ರತಿಯೊಬ್ಬರೂ ನಮ್ಮ ಸಂಸ್ಕಾರ, ಸಂಸಕ್ಕತಿ ಉಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಕಾವ್ಯ ಎಂದರೇ ಪದಗಳ ಜೋಡಣೆ ಅಷ್ಟೇ ಇಲ್ಲ. ಅನುಭವ ಧಾರೆ ಎರೆಯುವಂಥದ್ದು. ಸಾಧಕರಿಗೆ ಸನ್ಮಾನ ಎಂದರೆ ಸಮಾಜದ ಅಭಿವೃದ್ಧಿಗೆ ಪೂರಕವಾದದ್ದು ಎಂದರು.
ಬೆಂಗಳೂರು ರಾಮೋಹಳ್ಳಿ ಸಿದ್ಧಾರೂಢ ಮಿಷನ್ ಆಶ್ರಮದ ಶ್ರೀ ಆರೂಢ ಭಾರತೀ ಸ್ವಾಮೀಜಿ ಮಾತನಾಡಿ, ಸಾಹಿತ್ಯ, ಸಂಗೀತದಿಂದ ಕಲೆ ಬೆಳಗುತ್ತದೆ. ಸಾಹಿತ್ಯ ಎಂದರೆ ಜೀವನಾನುಭವದ ಸಾರ. ಅನುಭವದ ಪರಿಪಕ್ವತೆ ಎಂದು ಬಣ್ಣಿಸಿದರು.
ಟಿವಿ ಸುದ್ದಿಗಳಿಗಿಂತ ವೃತ್ತಪತ್ರಿಕೆಗಳ ಸುದ್ದಿಗಳು ನಿಖರವಾಗಿರುತ್ತದೆ. ಆದ್ದರಿಂದ ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣಗಳಿಗಿಂದ ಪುಸ್ತಕ, ಪತ್ರಿಕೆ ಓದಬೇಕು ಎಂದರು.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಎಚ್.ಡಿ. ಕೋಟೆ ತಾಲೂಕು ಬಿಇಒ ಸಿ.ಎನ್. ರಾಜು ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಪ್ರಯತ್ನ, ಶಿಕ್ಷಕರ ಪರಿಶ್ರಮ ಹಾಗೂ ವಿದ್ಯಾರ್ಥಿಗಳಿಗೆ ನಡೆಸಿದ ಪರೀಕ್ಷೆಗಳಿಂದ ಉತ್ತಮ ಫಲಿತಾಂಶ ಸಿಕ್ಕಿದೆ ಎಂದರು.
ಕಸಾಪ ಜಿಲ್ಲಾ ಉಪಾಧ್ಯಕ್ಷ ಟಿ.ತ್ಯಾಗರಾಜ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವಿಜಯಪುರ ಜಿಲ್ಲಾಧ್ಯಕ್ಷ ಪಂಡೀತ ಭೀ.ಅವಜಿ, ಎಚ್.ಡಿ. ಕೋಟೆ ತಾಲೂಕು ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಿ.ಎಸ್.ಮಂಜುನಾಥ್ ಪಾಲ್ಗೊಂಡಿದ್ದರು.
ಕವಿಗೋಷ್ಠಿ, ಸಾಧಕರಿಗೆ ರತ್ನ ಪ್ರಶಸ್ತಿ
ಪುಷ್ಪಾ ನಾಗತಿಹಳ್ಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿ- ಕಾವ್ಯ ಬೆಳವಣಿಗೆ ಹಾಗೂ ಚಟುವಟಿಕೆಗಳ ವರ್ತಮಾನ ಯುವಪೀಳಿಗೆಯ ಪಾಲು ಕುರಿತು ವಿಷಯ ಮಂಡಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಶಶಿಕುಮಾರ್ ಮತ್ತು ತಂಡದವರು ಗೊರವರ ನೃತ್ಯ, ವಿಜಯಪುರ ಜಿಲ್ಲೆಯ ದೇವೇಂದ್ರ ಗೊಂದಳ ಮತ್ತು ತಂಡದಿಂದ ಗೊಂದಳ ಜಾನಪದ, ಮೈಸೂರಿನ ಕೆ. ಸುಶೀಲಾರಾವ್ ನೇತೃತ್ವದ ವಾಗೀಶ್ವರಿ ಭಜನಾ ಮಂಡಳಿಯಿಂದ ಜಾನಪದ ಗೀತೆ, ಚಿತ್ರದುರ್ಗ ಕಲಾತಂಡದಿಂದ ಸೋಬಾನೆ ಹಾಡು ಪ್ರಸ್ತುತಪಡಿಸಿದರು.