ವ್ಯಕ್ತಿತ್ವ ವಿಕಾಸಕ್ಕೆ ಉನ್ನತ ಗುರಿ, ಧ್ಯೇಯ ದಾರಿ ದೀಪ: ರಂಭಾಪುರಿಶ್ರೀ

ಮೈಸೂರಿನ ಶ್ರೀರಾಂಪುರ 2ನೇ ಹಂತದಲ್ಲಿರುವ ವೀರಶೈವ ಸಾರ್ವಜನಿಕ ಸೇವಾ ಸಂಸ್ಥೆಯಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.
ಮೈಸೂರಿನ ಶ್ರೀರಾಂಪುರ 2ನೇ ಹಂತದಲ್ಲಿರುವ ವೀರಶೈವ ಸಾರ್ವಜನಿಕ ಸೇವಾ ಸಂಸ್ಥೆಯಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಂಪುರದಲ್ಲಿ ಇಷ್ಟಲಿಂಗ ಮಹಾಪೂಜೆ
  • ಅಲಂಕೃತ ಸಾರೋಟ ಮೆರವಣಿಗೆ ಮೂಲಕ ಶ್ರೀರಂಭಾಪುರಿಶ್ರೀಗಳಿಗೆ ಅದ್ದೂರಿ ಸ್ವಾಗತ
  • ಧರ್ಮಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು.
ಮೈಸೂರು: ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಮುಖ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಶ್ರೀ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಶ್ರೀರಾಂಪುರ 2ನೇ ಹಂತದಲ್ಲಿರುವ ವೀರಶೈವ ಸಾರ್ವಜನಿಕ ಸೇವಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 
ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿ ದೀಪ. ಭೌತಿಕ ಬದುಕು ಶ್ರೀಮಂತಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕು. ಮಾನವ ಜೀವನದ ಉಜ್ವಲ ಭವಿಷ್ಯಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿ ಎಂಬ ಎರಡು ಕೀಲು ಅವಶ್ಯಕ ಎಂದು ನುಡಿದರು.
ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಜ್ಞಾವಂತರು ಹೆಜ್ಜೆ ಹಾಕಬೇಕಾಗಿದೆ. ಧರ್ಮಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಬಿತ್ತಿದ ಬೀಜದಂತೆ ಫಸಲು ಹೇಗೋ ಹಾಗೆಯೇ ನಮ್ಮ ಆಚರಣೆಯಂತೆ ಫಲ ಪ್ರಾಪ್ತಿಯಾಗಲಿದೆ ಎಂದು ಹೇಳಿದರು.
ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧಾರ್ಮಿಕ ಮತ್ತು ಸಾಮಾಜಿಕ ವಿಚಾರಧಾರೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ. ಕಾಯಕ ಮತ್ತು ದಾಸೋಹಕ್ಕೆ ವಿಶೇಷ ಆದ್ಯತೆ ಕೊಟ್ಟ ವೀರಶೈವ ಧರ್ಮ ಸಕಲರ ಶ್ರೇಯೋಭಿವೃದ್ಧಿಗೆ ಅಮೂಲ್ಯ ಮಾರ್ಗದರ್ಶನ ನೀಡಿದೆ. 
ಹಲವು ವರ್ಷಗಳಿಂದ ವೀರಶೈವ ಸಾರ್ವಜನಿಕ ಸೇವಾ ಸಂಸ್ಥೆ ಸಮಾಜದಲ್ಲಿ ಉತ್ತಮವಾದ ಕಾರ್ಯಕ್ರಮ ರೂಪಿಸಿ ಧರ್ಮ ಸಂಸ್ಕೃತಿ ಬೆಳೆಸುತ್ತಿರುವುದು ತಮಗೆ ಸಂತೋಷ ತಂದಿದೆ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಧರ್ಮ ಸಂಸ್ಕೃತಿಯ ನಾಡು ನಮ್ಮದು. ಹಿಂದು ಧರ್ಮದ ಸಂಸ್ಕೃತಿಯಲ್ಲಿ ನಾವೆಲ್ಲರೂ ಸಾಮರಸ್ಯದಿಂದ ಬಾಳುವ ಅವಶ್ಯಕತೆಯಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ವಿಚಾರ ಧಾರೆಗಳು ಸಮಾಜದ ಶ್ರೇಯಸ್ಸಿಗೆ ಮೂಲ ಎಂದು ಹೇಳಿದರು.
ಮೈಸೂರು ಅರಮನೆ ಜಪದಕಟ್ಟೆ ಮಠದ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಧನಗೂರು ಶ್ರೀ ಮುಮ್ಮಡಿ ಷಡಕ್ಷರ ಶಿವಾಚಾರ್ಯ ಸ್ವಾಮೀಜಿ ಅವರು ಧಾರ್ಮಿಕ ಮೌಲ್ಯಗಳ ಪುನರುತ್ಥಾನ ಮತ್ತು ವೀರಶೈವ ಧರ್ಮದ ಅರಿವು ಆದರ್ಶಗಳನ್ನು ಕುರಿತು ಮಾತನಾಡಿದರು.
ತಿ.ನರಸೀಪುರ, ಅಜ್ಜೀಪುರ, ತೆಂಡೆಕೆರೆ, ಗುರುವಿನಪುರ, ಹೊನ್ನಲಗೆರೆ, ನಂಜನಗೂಡು, ಕರ್ಪುರವಳ್ಳಿ ಶ್ರೀಗಳು ಪಾಲ್ಗೊಂಡಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ಘಟಕದ ಅಧ್ಯಕ್ಷ ಹಿನಕಲ್ ಬಸವರಾಜು, ಮಾಜಿ ಎಂ.ಎಲ್.ಸಿ. ತೋಂಟದಾರ್ಯ, ಬಸವ ಬಳಗ ಒಕ್ಕೂಟದ ಅಧ್ಯಕ್ಷ ಬ್ಯಾತಳ್ಳಿ ನಾಗರಾಜು, ಕೆ.ಕೆ.ಖಂಡೇಶ, ಎಸ್.ವಿ.ಮಂಜುನಾಥ, ತಾಯೂರು ಗಣೇಶಮೂರ್ತಿ, ಸಂಸ್ಥೆಯ ಅಧ್ಯಕ್ಷ ಬಿ.ಎನ್.ಸುಧಾಕರ ಪಾಲ್ಗೊಂಡಿದ್ದರು. ಬೆಂಗಳೂರಿನ ಶಿವಶಂಕರ ಶಾಸ್ತ್ರಿ ಸಂಗಡಿಗರಿಂದ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯಿತು. 

ಶ್ರೀಗಳಿಗೆ ಅದ್ದೂರಿ ಸ್ವಾಗತ

ಸಮಾರಂಭಕ್ಕೂ ಮುನ್ನ ಶ್ರೀರಾಂಪುರದ ಶನಿದೇವರ ದೇವಸ್ಥಾನದಿಂದ ಸಂಸ್ಥೆಯ ಆವರಣದವರೆಗೆ ಅಲಂಕೃತ ಸಾರೋಟ ಮೆರವಣಿಗೆ ಮೂಲಕ ಶ್ರೀರಂಭಾಪುರಿ ಜಗದ್ಗುರುಗಳನ್ನು ಪೂರ್ಣಕುಂಭ, ವಾದ್ಯವೈಭವಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಗಮಿಸಿದ ಸಕಲ ಸದ್ಭಕ್ತರಿಗೆ ಶುಭವನ್ನು ಹಾರೈಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net