ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುವ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಬೆಳೆಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಮಹತ್ವದ ಹೆಜ್ಜೆ ಇರಿಸಿದ್ದು, ನಿಗಮದ ಕಚೇರಿಯ ಆವರಣದಲ್ಲಿ ವಿದ್ಯುತ್ ವಾಹನಗಳಿಗಾಗಿ(ಇವಿ) ಮೇಲ್ದರ್ಜೆಗೇರಿಸಿದ ಅತ್ಯಾಧುನಿಕ 30 ಕೆವಿ ಫಾಸ್ಟ್ ಚಾಜಿರ್ಂಗ್ ಘಟಕವನ್ನು ಉದ್ಘಾಟಿಸಲಾಯಿತು.
ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ನಿಗಮ ಕಚೇರಿಯ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸೆಸ್ಕ್ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಅವರು ಘಟಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ರಮೇಶ್ ಬಂಡಿಸಿದ್ದೇಗೌಡ, ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರಮಾಣ ಹೆಚ್ಚಾಗುತ್ತಿದ್ದು, ನಿಗಮದ ವತಿಯಿಂದ ಇವಿ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಇದರಿಂದ ವಾಯುಮಾಲಿನ್ಯ ತಡೆಯುವ ಜತೆಗೆ ಇಂಧನದ ಆಮದು ಅವಲಂಬನೆ ತಗ್ಗಿಸಿ, ಹಸಿರು ಶಕ್ತಿಯ ಬಳಕೆಯನ್ನು ಉತ್ತೇಜಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ, ಎಂದರು.
ನಿಗಮದ ಕಚೇರಿಯಲ್ಲಿ ಈ ಹಿಂದೆ ಇದ್ದ ಇವಿ ಚಾರ್ಜಿಂಗ್ ಘಟಕದ ಸಾಮರ್ಥ್ಯವನ್ನು ಪ್ರಸ್ತುತ 30 ಕೆವಿ ಫಾಸ್ಟ್ ಚಾಜಿರ್ಂಗ್ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗಿದ್ದು, ಒಂದೇ ಸಮಯದಲ್ಲಿ ಎರಡು ಕಾರುಗಳನ್ನು ಚಾರ್ಜ್ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಫಾಸ್ಟ್ ಚಾಜಿರ್ಂಗ್ ತಂತ್ರಜ್ಞಾನ ಇರುವುದರಿಂದ ಒಂದು ಕಾರನ್ನು 40ರಿಂದ 45 ನಿಮಿಷದಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ ಎಂದರು.
ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್, ಮುಖ್ಯ ಪ್ರಧಾನ ವ್ಯವಸ್ಥಾಪಕ(ತಾಂತ್ರಿಕ) ಶರಣಮ್ಮ ಎಸ್.ಜಂಗಿನ, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಪ್ರಧಾನ ವ್ಯವಸ್ಥಾಪಕ ಎನ್.ಆರ್. ತಸ್ನೀಂ ತಬಸ್ಸುಂ, ಆರ್. ರಾಮಸ್ವಾಮಿ, ಎಚ್.ಆರ್. ದಿನೇಶ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.