ಕೆ.ಆರ್.ನಗ ತಾಲೂಕಿನ ಚೌಕಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೂರ್ಯಪುತ್ರ ಟ್ರಸ್ಟ್ ವತಿಯಿಂದ ಅಧ್ಯಕ್ಷ ರಾಘವೇಂದ್ರಸ್ವಾಮಿ ನೀಡಿದ್ದ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮಕ್ಕೆ ಎಂಸಿಡಿಸಿಸಿ ಅಧ್ಯಕ್ಷ ದೊಡ್ಡಸ್ವಾಮೇಗೌಡ ಚಾಲನೆ ನೀಡಿದರು. ಬಿಇಒ ಆರ್.ಕೃಷ್ಣಪ್ಪ, ದೈಹಿಕ ಪರಿವೀಕ್ಷಕ ಸ್ವಾಮಿಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಹೇಮಾಲತಾ, ಸಿಆರ್‌ಪಿ ಹರಿಪ್ರಸಾದ್, ಮುಖ್ಯಶಿಕ್ಷಕರಾದ ಗೋಪಾಲ, ನಾರಾಯಣಶೆಟ್ಟಿ, ಕೃಷ್ಣನಾಯಕ, ಎಸ್‌ಡಿಎಂಸಿ ಸದಸ್ಯರಾದ ನಂಜಪ್ಪ, ಮಹದೇವಯ್ಯ, ಶಿಕ್ಷಕರಾದ ಯತೀಶ್, ಮಾದೇಗೌಡ ಇತರರಿದ್ದರು.
ಕೆ.ಆರ್.ನಗರ: ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ 600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದ್ದು, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಮೂರು ಶಾಲೆಗಳನ್ನು ನೀಡಿದೆ ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಮಾಹಿತಿ ನೀಡಿದರು.
ತಾಲೂಕಿನ ಚೌಕಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸೂರ್ಯಪುತ್ರ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರಸ್ವಾಮಿ ಅವರು ನೀಡಿದ್ದ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮಕ್ಕೆ ಅರಕೆರೆ ಕೊಪ್ಪಲು ಗ್ರಾಮದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಗಂಧನಹಳ್ಳಿ, ಕೆಸ್ತೂರುಕೊಪ್ಪಲು ಮತ್ತು ಹಂಪಾಪುರ ಗ್ರಾಮಕ್ಕೆ ಕೆಪಿಎಸ್ ಶಾಲೆ ಮಂಜೂರಾಗಿದ್ದು, ಜುಲೈನಿಂದ ತರಗತಿಗಳು ಆರಂಭವಾಗಲಿವೆ. ಈ ಹಿಂದೆ ಆರಂಭಗೊಂಡ ಹೆಬ್ಬಾಳು ಗ್ರಾಮದ ಕೆಪಿಎಸ್ ಶಾಲೆ ಉತ್ತಮವಾಗಿ ನಡೆಯುತ್ತಿದೆ. 1ರಿಂದ ಪಿಯುವರೆಗೆ ಆಂಗ್ಲಭಾಷೆ ಶಿಕ್ಷಣ ದೊರೆಯುವುದರಿಂದ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇದರ ಜತೆಗೆ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವ ಮೂಲಕ ನಮ್ಮ ಸರ್ಕಾರ ಖಾಸಗಿ ಶಾಲೆಗಳಷ್ಟೇ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದೆ ಎಂದು ಹೇಳಿದರು.
ಆರ್.ಕೃಷ್ಣಪ್ಪ ಅವರು ಶಿಕ್ಷಣಾಧಿಕಾರಿಯಾದ ನಂತರ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಹೆಚ್ಚು ಫಲಿತಾಂಶ ಪಡೆಯಲು ಪ್ರಯತ್ನಿಸುವ ಜತೆಗೆ ಶಿಕ್ಷಣದ ಗುಣಮಟ್ಟ ಹಾಗೂ ಮಕ್ಕಳಿಗೆ ಸಂಸ್ಕಾರ ಕಲಿಸಲು ಒತ್ತು ನೀಡಬೇಕು. ಈ ಬಗ್ಗೆ ಬಿಇಒ ಅವರು ಶಿಕ್ಷಕರಿಗೆ ಮಾರ್ಗದರ್ಶನ ಮತ್ತು ಕಾರ್ಯಾಗಾರ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಅರಕೆರೆಕೊಪ್ಪಲು ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಯ ಮಕ್ಕಳಿಗೆ ಸುಮಾರು 2 ಸಾವಿರ ನೋಟ್ ಪುಸ್ತಕಗಳನ್ನು ವಿತರಿಸುತ್ತಿರುವ ರಾಘವೇಂದ್ರಸ್ವಾಮಿ ಅವರು ಕಳೆದ ಬಾರಿ ಶಾಲಾ ಬ್ಯಾಗ್‌ಗಳನ್ನು ವಿತರಿಸಿದ್ದರು. ಇದರಿಂದ ಮಕ್ಕಳ ಓದಿಗೆ ಉತ್ತೇಜನ ನೀಡಿದಂತಾಗಿದ್ದು, ಇಂತಹ ಕಾರ್ಯಕ್ಕೆ ಉಳ್ಳವರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.