ವನ್ಯಜೀವಿಗಳ ದಾಳಿಗೆ 181 ಜನರು ಬಲಿ

ಮಾನವ-ಕಾಡುಪ್ರಾಣಿಗಳ
ಮಾನವ-ಕಾಡುಪ್ರಾಣಿಗಳ
Published on

ಪ್ರಮುಖ ಮುಖ್ಯಾಂಶಗಳು

  • ಮೂರೂವರೆ ವರ್ಷದಲ್ಲಿ ನೂರಾರು ಸಾವು
  • ಮಾನವ-ಕಾಡುಪ್ರಾಣಿಗಳ ಸಂಘರ್ಷಕ್ಕೆ ಬೇಕಿದೆ ಶಾಶ್ವತ ಪರಿಹಾರ
ಅವಿನಾಶ್ ಜೈನಹಳ್ಳಿ ಮೈಸೂರು
ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷ ತಾರಕಕ್ಕೇರಿದ್ದು, ಮೂರೂವರೆ ವರ್ಷದಲ್ಲಿ ವನ್ಯಜೀವಿಗಳ ದಾಳಿಯಿಂದ ರಾಜ್ಯದಲ್ಲಿ 181 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಿತಿ ಮೀರಿರುವ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.
ಅರಣ್ಯ ಇಲಾಖೆ ನೀಡುವ ಅಂಕಿ ಅಂಶಗಳ ಪ್ರಕಾರ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೆಚ್ಚಾಗಿ ಚಾಮರಾಜನಗರ, ಮೈಸೂರು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ರಾಮನಗರ, ಹಾಸನ ಜಿಲ್ಲೆಗಳಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗಿ ಕಂಡು ಬಂದಿದೆ. ಜತೆಗೆ ಈ ಜಿಲ್ಲೆಗಳಲ್ಲಿ ವನ್ಯಜೀವಿ ದಾಳಿಗೆ ಪ್ರಾಣಬಿಟ್ಟವರ ಸಂಖ್ಯೆಯೂ ಹೆಚ್ಚಾಗಿದೆ.
2023-24ನೇ ಸಾಲಿನಿಂದ 2026ರ ಆಗಸ್ಟ್ 17ರವರೆಗೆ ರಾಜ್ಯದಲ್ಲಿ ವಿವಿಧ ಕಾಡುಪ್ರಾಣಿಗಳ ದಾಳಿಗೆ 181 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಬರೋಬ್ಬರಿ 131 ಜನ ಆನೆ ದಾಳಿಗೆ ಬಲಿಯಾಗಿದ್ದಾರೆ. ಅಂದರೆ, ಈ ಅವಧಿಯಲ್ಲಿ ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಪೈಕಿ ಶೇ.72ಕ್ಕೂ ಹೆಚ್ಚು ಜನರು ಆನೆಗಳ ದಾಳಿಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಆನೆಯದ್ದೇ ಅಬ್ಬರ

ಆನೆ ದಾಳಿಯ ನಂತರದ ಸ್ಥಾನದಲ್ಲಿ ಹುಲಿ, ಚಿರತೆ, ಕರಡಿ ಹಾಗೂ ಕಾಡುಕೋಣಗಳಿವೆ. ಈ ಅವಧಿಯಲ್ಲಿ ಹುಲಿ ದಾಳಿಗೆ 14, ಚಿರತೆ ದಾಳಿಗೆ 10, ಕರಡಿ ದಾಳಿಗೆ 9 ಹಾಗೂ ಕಾಡುಕೋಣ ದಾಳಿಗೆ 7 ಜನರು ಮೃತಪಟ್ಟಿದ್ದಾರೆ. ಉಳಿದವರು ಕೋತಿ, ಮೊಸಳೆ, ಕಾಡುಹಂದಿ ಸೇರಿದಂತೆ ಇತರ ಪ್ರಾಣಿಗಳ ದಾಳಿಗೆ ಬಲಿಯಾಗಿದ್ದಾರೆ. ಆದರೆ, ಅಂಕಿ-ಅಂಶಗಳತ್ತ ಕಣ್ಣಾಡಿಸಿದರೆ ಒಂದು ಸಂಗತಿ ಸ್ಪಷ್ಟ, ವನ್ಯಜೀವಿ ದಾಳಿಯ ವಿಚಾರದಲ್ಲಿ ರಾಜ್ಯದ ಅತಿ ದೊಡ್ಡ ಸವಾಲು ಆನೆ-ಮನುಷ್ಯ ಸಂಘರ್ಷವೇ.

ಒಂದು ವರ್ಷದಲ್ಲಿ 48 ಬಲಿ!

ಕಳೆದ 2023-24ನೇ ಸಾಲಿನಲ್ಲಿ ವಿವಿಧ ಕಾಡುಪ್ರಾಣಿಗಳ ದಾಳಿಗೆ 65 ಜನರು ಮೃತಪಟ್ಟಿದ್ದರು. ಈ ಪೈಕಿ ಆನೆ ದಾಳಿಯೊಂದರಲ್ಲೇ 48 ಜನ ಬಲಿಯಾಗಿದ್ದರು. 2024-25ರಲ್ಲಿ ಒಟ್ಟು 46 ಜನ ಮೃತಪಟ್ಟಿದ್ದು, ಆನೆ ದಾಳಿಗೆ 36 ಜನ ಬಲಿಯಾಗಿದ್ದಾರೆ. 2025-26ರಲ್ಲಿ ವಿವಿಧ ಪ್ರಾಣಿಗಳ ದಾಳಿಗೆ 53 ಜನ ಮೃತಪಟ್ಟಿದ್ದು, 35 ಸಾವುಗಳು ಆನೆಗಳಿಂದಲೇ ಸಂಭವಿಸಿವೆ. 2026-27ನೇ ಸಾಲಿನಲ್ಲಿ ಆಗಸ್ಟ್ 17ರವರೆಗೆ 17 ಜನ ಮೃತಪಟ್ಟಿದ್ದು, 12 ಸಾವು ಆನೆ ದಾಳಿಯಿಂದ ಸಂಭವಿಸಿದೆ.

ಮೈಸೂರು ಭಾಗವೇ ಹಾಟ್‌ಸ್ಪಾಟ್

ಆನೆಗಳ ಹಾವಳಿ ಹೆಚ್ಚಾಗಿ ಕೇಳಿಬರುತ್ತಿರುವ ಪ್ರದೇಶಗಳಲ್ಲೇ ಸಂಘರ್ಷವೂ ಹೆಚ್ಚು. ಹಾಸನ, ಕೊಡಗು, ಚಾಮರಾಜನಗರ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಆನೆ ದಾಳಿ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ.
ವಿಶೇಷವಾಗಿ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲೂಕುಗಳಲ್ಲಿ ಮಾನವ-ಆನೆ ಸಂಘರ್ಷ ನಿರಂತರ ಸವಾಲಾಗಿದೆ. ಮೈಸೂರು, ಚಾಮರಾಜನಗರ, ಕೊಡಗು ಭಾಗದಲ್ಲೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳು, ಕೃಷಿ ಜಮೀನುಗಳು ಹಾಗೂ ತೋಟಗಳಲ್ಲಿ ಆನೆಗಳ ಓಡಾಟದಿಂದ ಜನರು ಆತಂಕ ಎದುರಿಸುತ್ತಿದ್ದಾರೆ.
ಆನೆಗಳಿಗೆ ವಿಶಾಲವಾದ ಸಂಚಾರ ಪ್ರದೇಶ ಬೇಕು. ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಅವು ಒಂದರಿಂದ ಮತ್ತೊಂದು ಅರಣ್ಯ ಪ್ರದೇಶಕ್ಕೆ ಸಂಚರಿಸುತ್ತವೆ. ಆದರೆ ಈ ಸಾಂಪ್ರದಾಯಿಕ ಸಂಚಾರ ಮಾರ್ಗಗಳ ನಡುವೆ ಕೃಷಿ ಜಮೀನು, ತೋಟ, ರಸ್ತೆ, ರೈಲುಮಾರ್ಗ ಹಾಗೂ ವಸತಿ ಪ್ರದೇಶಗಳು ಹೆಚ್ಚಾಗುತ್ತಿರುವುದು ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ.
ಹುಲಿಯ ಹೆಜ್ಜೆಯೂ ಆತಂಕಕಾರಿ
ಆನೆಗಳ ನಂತರ ಹುಲಿ ದಾಳಿಯೂ ಗಮನಾರ್ಹವಾಗಿದೆ. ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಆನೆ ಮನುಷ್ಯನನ್ನು ಬೇಟೆಯಾಡುವುದಿಲ್ಲ. ಆದರೆ ಅಚ್ಚರಿ, ಭಯ, ಮರಿಗಳ ರಕ್ಷಣೆ ಅಥವಾ ಮುಖಾಮುಖಿಯಂತಹ ಸಂದರ್ಭಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ. ಹುಲಿ, ಚಿರತೆ ಮತ್ತಿತರ ಮಾಂಸಾಹಾರಿ ಪ್ರಾಣಿಗಳ ವಿಚಾರದಲ್ಲಿ ಅವುಗಳ ಬೇಟೆ ಪ್ರದೇಶ ಮತ್ತು ಮಾನವ ಚಟುವಟಿಕೆ ನಡುವಿನ ಅಂತರ ಕಡಿಮೆಯಾಗುವುದೂ ಸಂಘರ್ಷಕ್ಕೆ ಕಾರಣವಾಗುತ್ತದೆ.
ವರ್ಷ ಒಟ್ಟು ವನ್ಯಜೀವಿ ದಾಳಿ ಸಾವು ಆನೆ ದಾಳಿ ಹುಲಿ ದಾಳಿ ಚಿರತೆ ದಾಳಿ
2023-24 65 48 5 3
2024-25 46 36 2 1
2025-26 53 35 7 5
2026-27(ಆ.17ರ ವರೆಗೆ) 17 12 0 1
ಒಟ್ಟು 181 131 14 10
"

ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿರಂತರವಾಗಿದೆ. ಅರಣ್ಯ ಇಲಾಖೆಯು ಮಾನವ-ವನ್ಯಜೀವಿ ಸಂಘರ್ಷವನ್ನು ವೈಜ್ಞಾನಿಕವಾಗಿ ತಡೆಯಬೇಕು. ಮುಖ್ಯವಾಗಿ ಆನೆಗಳನ್ನು ಕಾಡಿಗೆ ಅಟ್ಟುವುದಷ್ಟೇ ಪರಿಹಾರವಲ್ಲ. ಅವುಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳ ರಕ್ಷಣೆ, ಕಾಡಂಚಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆ, ಸುರಕ್ಷಿತ ಬೇಲಿ, ತ್ವರಿತ ಎಚ್ಚರಿಕೆ ಸಂದೇಶ, ಅರಣ್ಯದಲ್ಲಿ ಆಹಾರ, ನೀರಿನ ಲಭ್ಯತೆ ಹಾಗೂ ಸ್ಥಳೀಯರ ಸಹಭಾಗಿತ್ವಕ್ಕೆ ಆದ್ಯತೆ ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net