ಭಿಕ್ಷುಕಿ ಬಳಿ ಪೊಲೀಸ್​ ಇಲಾಖೆಗೆ ಸಂಬಂಧಿಸಿದ ಫೈಲ್ಸ್​ ಪತ್ತೆ: ಪ್ರಕರಣ ಹಿಂದಿದೆ ಭಾರೀ ಹುನ್ನಾರ..!

Police File
Published on

ಮೈಸೂರು: ನಗರದ ಮೌಂಟೆಡ್ ಪೋಲಿಸ್ ಕಮಾಂಡೆಂಟ್ ಕಚೇರಿಯ ಫೈಲ್​ಗಳು ಭಿಕ್ಷುಕಿ ಕೈಗೆ ಸಿಕ್ಕ ಪ್ರಕರಣವೀಗ ಮಹತ್ವದ ತಿರುವು ಪಡೆದುಕೊಂಡಿದೆ. ಪೊಲೀಸ್ ಫೈಲ್ ಬೀದಿಗೆ ಬಿಸಾಡಿದ್ದರ ಹಿಂದೆ ಪ್ರಮೋಷನ್ ತಪ್ಪಿಸುವ ಹುನ್ನಾರವಿದೆ ಎನ್ನಲಾಗಿದೆ. ಪ್ರಮೋಷನ್ ವಿಚಾರದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ನಡುವೆ ಹಗ್ಗಜಗ್ಗಾಟ ನಡೆದಿರುವ ವಿಚಾರವೂ ಬೆಳಕಿಗೆ ಬಂದಿದೆ.

ಮುಖ್ಯಪೇದೆ ಮಲ್ಲಿಕಾರ್ಜುನ್‌ ಜೇಷ್ಠತೆಯಲ್ಲಿ ಹಿರಿಯಯಾಗಿದ್ದರೂ ಪ್ರಮೋಷನ್ ನೀಡದೆ ಕಿರುಕುಳ ನೀಡುತ್ತಿದ್ದರಂತೆ. ಮಲ್ಲಿಕಾರ್ಜುನ್‌ಗಿಂತ ಕಡಿಮೆ ಜೇಷ್ಠತೆ ಹೊಂದಿರುವ ರಾಜುಗೆ ಪ್ರಮೋಷನ್ ನೀಡಿದ್ದಲ್ಲದೆ, ಬೇಕಂತಲೇ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಮೌಂಟೆಡ್ ಪೊಲೀಸ್ ಕಮಾಂಡೆಂಟ್ ನಾಗರಾಜ್ ಹಾಗೂ ಸಹಾಯಕ ಆಡಳಿತಾಧಿಕಾರಿ ಭೋಪಯ್ಯ ಅವರ ವಿರುದ್ಧ ಮಲ್ಲಿಕಾರ್ಜುನ್​ ಆರೋಪಿಸಿದ್ದು, ಕಾನ್ಸ್‌ಟೇಬಲ್ ಹುದ್ದೆಯಿಂದ ಹೆಡ್ ಕಾನ್ಸ್‌ಟೇಬಲ್ ಹಾಗೂ ಎಸ್‌ಐ ಆಗಿ ರಾಜುಗೆ ಮುಂಬಡ್ತಿ ನೀಡಿದ್ದನ್ನು ಪ್ರಶ್ನಿಸಿ ಮಲ್ಲಿಕಾರ್ಜುನ್​ ಹೈಕೋರ್ಟ್ ಮೆಟ್ಟಿಲೇರಿದ್ದರು.

ಬಳಿಕ ಮಲ್ಲಿಕಾರ್ಜುನ್ ಪರ ತೀರ್ಪು ಬಂದಿತ್ತು. ಅದರಂತೆ ರಾಜುಗೆ ಹಿಂಬಡ್ತಿ ನೀಡಿ, ಮಲ್ಲಿಕಾರ್ಜುನ್‌ಗೆ ಮುಂಬಡ್ತಿ ನೀಡುವಂತೆ ಐಜಿಪಿ ಆದೇಶ ಹೊರಡಿಸಿದ್ದರು. ಆದರೆ, ಆಡಳಿತ ವಿಭಾಗದ ಐಜಿಪಿ ಹಿತೇಂದ್ರ ಪತ್ರಕ್ಕೂ ಕೇರ್​ ಮಾಡಿರಲಿಲ್ಲ. ಎರಡು ಬಾರಿ ಪತ್ರ ಬರೆದು ಸಮಸ್ಯೆ ಸರಿಮಾಡುವಂತೆ ತಿಳಿಸಿದ್ದರೂ ಪ್ರಯೋಜನ ಆಗಿರಲಿಲ್ಲ.

ಇದೀಗ ಪ್ರಮೋಷನ್​ಗೆ ಸಹಕಾರಿಯಾಗಿದ್ದ ಫೈಲ್ ಕಚೇರಿಯಿಂದ ಹೊರಗೆ ಭಿಕ್ಷುಕಿ ಕೈಯಲ್ಲಿ ಪತ್ತೆಯಾಗಿದೆ. ಇದು ಮುಖ್ಯಪೇದೆಯ ಭವಿಷ್ಯ ನಿರ್ಧರಿಸುವ ಫೈಲ್ ಆಗಿದ್ದು, ಪ್ರಕರಣ ನಡೆದು 5 ದಿನ ಕಳೆಯುತ್ತಿದ್ದರೂ ಯಾವುದೇ ತನಿಖೆ ಇಲ್ಲ. ಇಡೀ ಪ್ರಕರಣದ ಸುತ್ತ ಇದೀಗ ಹಲವು ಅನುಮಾನದ ಹುತ್ತ ಬೆಳೆದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net