ಅಮೆರಿಕದಲ್ಲಿ ಮೈಸೂರಿನ ಉದ್ಯಮಿ, ಪತ್ನಿ, ಮಗ ಶವವಾಗಿ ಪತ್ತೆ! ಕೊಲೆಗೈದು ಆ*ಹತ್ಯೆ ಮಾಡಿಕೊಂಡಿರುವ ಶಂಕೆ! Harshavardhana Kikkeri

Harshavardhana Kikkeri
Published on

Harshavardhana Kikkeri : ಮೈಸೂರು ಮೂಲದ ಟೆಕ್ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೆರಿಕದ ವಾಷಿಂಗ್ಟನ್​ನ ಅವರ ನಿವಾಸದಲ್ಲಿ ನಡೆದಿದೆ. ಅಲ್ಲದೆ, ಉದ್ಯಮಿಯ ಪತ್ನಿ ಮತ್ತು ಮಗನ ಮೃತದೇಹಗಳು ಗುಂಡು ಹಾರಿಸಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಹಲವಾರು ವರದಿಗಳು ಬಂದಿವೆ.

ಮೃತರನ್ನು ಹರ್ಷವರ್ಧನ ಕಿಕ್ಕೇರಿ (57), ಆತನ ಪತ್ನಿ ಶ್ವೇತಾ ಪನ್ಯಂ (44) ಮತ್ತು 14 ವರ್ಷದ ಮಗನೆಂದು ಗುರುತಿಸಲಾಗಿದೆ. ಈ ಮಾಹಿತಿಯನ್ನು ವಾಷಿಂಗ್ಟನ್​ನ ಕಿಂಗ್​ ಕೌಂಟಿಯ ವೈದ್ಯಕೀಯ ಪರೀಕ್ಷಕರ ಕಚೇರಿ ತಿಳಿಸಿದೆ. ಅಂದಹಾಗೆ, ಹರ್ಷವರ್ಧನ್​ ಮೈಸೂರಿನ ಮೂಲದವರು. ಇಲ್ಲಿನ ವಿಜಯನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ರೊಬೊಟಿಕ್ಸ್​ ಕಂಪನಿಯಾದ ಹೋಲೋವರ್ಲ್ಡ್​ನ ಸಿಇಒ ಆಗಿದ್ದರು. ಪತ್ನಿ ಶ್ವೇತಾ ಅದೇ ಕಂಪನಿಯ ಸಹ ಸಂಸ್ಥಾಪಕಿ ಆಗಿದ್ದರು.

ಈ ಪ್ರಕರಣವನ್ನು ಪೊಲೀಸರು ಕೊಲೆ ಹಾಗೂ ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ಆದಾಗ್ಯೂ, ಈ ಘಟನೆಯ ಹಿಂದಿರುವ ನಿಖರವಾದ ಕಾರಣವನ್ನು ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಕಿಂಗ್ ಕೌಂಟಿ ಶೆರಿಫ್ ವಕ್ತಾರ ಬ್ರಾಂಡಿನ್ ಹಲ್ ಹೇಳಿಕೆ ನೀಡಿದ್ದಾರೆ ಎಂದು ದಿ ಸಿಯಾಟಲ್ ಟೈಮ್ಸ್ ವರದಿ ಮಾಡಿದೆ.

ಈ ಘಟನೆ ಕಳೆದ ಗುರುವಾರ ರಾತ್ರಿ (ಅಮೆರಿಕ ಸಮಯ) ನಡೆದಿದ್ದು, ತನಿಖೆ ನಡೆಯುತ್ತಿದೆ. ವರದಿಗಳ ಪ್ರಕಾರ, 7 ವರ್ಷದ ಕಿರಿಯ ಮಗ ಈ ಘಟನೆ ನಡೆದಾಗ ಮನೆಯ ಹೊರಗೆ ಇದ್ದನು, ಆದ್ದರಿಂದ ಆತ ಬದುಕುಳಿದಿದ್ದಾನೆ. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಸಹಾಯವಾಣಿ ಸಂಖ್ಯೆ 911ಕ್ಕೆ ಕರೆ ಬಂದ ನಂತರ ಪೊಲೀಸರು ಆಗ್ನೇಯ ಭಾಗದಲ್ಲಿರುವ 129ನೇ ಪ್ಲೇಸ್​ ಟೌನ್‌ಹೌಸ್‌ಗೆ ಧಾವಿಸಿದರು. ಈ ವೇಳೆ ಮನೆಯ ಮುಂಭಾಗದ ಕಿಟಕಿಯ ಮೇಲೆ ರಕ್ತದ ಕಲೆಗಳಿರುವುದನ್ನು ಮತ್ತು ಬೀದಿಯಲ್ಲಿ ಒಂದು ಟೊಳ್ಳಾದ ಗುಂಡನ್ನು ಬಿದ್ದಿರುವುದನ್ನು ನೋಡಿದರು. ಬಳಿಕ ಒಳಗೆ ಹೋಗಿ ನೋಡಿದಾಗ ಮೂವರ ಮೃತದೇಹ ಪತ್ತೆಯಾಗಿದೆ. ಹರ್ಷವರ್ಧನ್​ ಅವರು ಹೆಂಡತಿ ಮತ್ತು ಮಗನಿಗೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಇಂತಹ ತನಿಖೆಗೆ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಪೊಲೀಸರು ಈ ಘಟನೆಗೆ ಕಾರಣವನ್ನು ತಿಳಿಯಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಬ್ರಾಂಡಿನ್ ಹಲ್ ಹೇಳಿದರು.

ಹರ್ಷವರ್ಧನ ಕಿಕ್ಕೇರಿ ಯಾರು?

ಕರ್ನಾಟಕದ ಕಿಕ್ಕೇರಿ ಗ್ರಾಮದವರಾದ ಟೆಕ್ ನವೋದ್ಯಮಿ ಹರ್ಷವರ್ಧನ ಕಿಕ್ಕೇರಿ, ಮೈಸೂರಿನಲ್ಲಿ ಮತ್ತು ನಂತರ ಅಮೆರಿಕದಲ್ಲಿ ಶಿಕ್ಷಣ ಪಡೆದರು. ಸಿರಾಕ್ಯೂಸ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು ಮೈಕ್ರೋಸಾಫ್ಟ್‌ನೊಂದಿಗೆ ಕೆಲಸ ಮಾಡಿ ರೊಬೊಟಿಕ್ಸ್ ಮೇಲೆ ಗಮನ ಹರಿಸಿದರು. ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ TEDx ಭಾಷಣದ ವಿವರಣೆಯ ಪ್ರಕಾರ, ಕಿಕ್ಕೇರಿ ಮೈಕ್ರೋಸಾಫ್ಟ್‌ನಿಂದ ಗೋಲ್ಡ್ ಸ್ಟಾರ್, ಇನ್ಫೋಸಿಸ್‌ನಿಂದ ಎಕ್ಸಲೆನ್ಸ್ ಪ್ರಶಸ್ತಿ, ಭಾರತ್ ಪೆಟ್ರೋಲಿಯಂ ವಿದ್ಯಾರ್ಥಿವೇತನ ಮತ್ತು ಹಲವಾರು ಚೆಸ್ ಚಾಂಪಿಯನ್‌ಶಿಪ್‌ಗಳು ಸೇರಿದಂತೆ ಹಲವಾರು ನಾಯಕತ್ವ ಪುರಸ್ಕಾರಗಳನ್ನು ಪಡೆದಿದ್ದಾರೆ. ಅಲ್ಲದೆ, ಅಮೆರಿಕ, ಚೀನಾ, ಜಪಾನ್ ಮತ್ತು ಯುರೋಪ್‌ನಂತಹ ದೇಶಗಳಿಂದ 44 ಅಂತಾರಾಷ್ಟ್ರೀಯ ಪೇಟೆಂಟ್‌ಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net