ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಒಲಂಪಿಕ್ಸ್ ಪದಕ ವಿಜೇತ​ ಕುಸ್ತಿಪಟು ಸಾಕ್ಷಿ ಮಲಿಕ್

Sakshi malik
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, 2022ರ ದಸರಾ ಕ್ರೀಡಾಕೂಟಕ್ಕೆ ಒಲಂಪಿಕ್ಸ್​ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಗುರುವಾರ (ಸೆ.29) ಚಾಲನೆ ನೀಡಿದರು.

ದಸರಾ ಕ್ರೀಡಾಕೂಟ ಉಪ ಸಮಿತಿಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬಲೂನ್ ಹಾರಿ ಬಿಡುವ ಮೂಲಕ ಉದ್ಘಾಟಿಸಲಾಯಿತು. ಕಲಾ ತಂಡಗಳ ಮೆರುಗಿನೊಂದಿಗೆ ಐದು ವಿಭಾಗಗಳ ಕ್ರೀಡಾಪಟುಗಳ ಆಕರ್ಷಕ ಪಥಸಂಚಲನ ನಡೆಯಿತು. ಪೊಲೀಸ್ ಬ್ಯಾಂಡ್ ಸಂಗೀತ ಎಲ್ಲರನ್ನು ಆಕರ್ಷಿಸಿತು. 5 ವಿಭಾಗಗಳಿಂದ 4500 ಕ್ರೀಡಾಪಟುಗಳು, 27 ಆಟೋಟಗಳಲ್ಲಿ ಸ್ಪರ್ಧಿಸಲಿದ್ದಾರೆ.

ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ದಸರಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರೆ, ಕ್ರೀಡಾ ಸಚಿವ ಡಾ.ಸಿ.ನಾರಾಯಣಗೌಡ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ವರ್ಷಾ ಅವರ ನೇತೃತ್ವದಲ್ಲಿ ಗುರುವಾರ ಮುಂಜಾನೆ ಚಾಮುಂಡಿಬೆಟ್ಟದಿಂದ ಹೊತ್ತು ತಂದ ಕ್ರೀಡಾ ಜ್ಯೋತಿಯನ್ನು ಮೇಯರ್ ಶಿವಕುಮಾರ್ ಸ್ವೀಕರಿಸಿದರು. ನಗರದ ವಿವಿಧ ಭಾಗದಲ್ಲಿ ಕ್ರೀಡಾಜ್ಯೋತಿ ಸಂಚರಿಸಿತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟು ಮೋಹಿತ್ ಎನ್.ರಾಜ್ ಅವರು ಎಲ್ಲ ಕ್ರೀಡಾಪಟುಗಳ ಪರವಾಗಿ ಪ್ರತಿಜ್ಞಾ ಸ್ವೀಕರಿಸಿದರು.

ಸಚಿವ ನಾರಾಯಣಗೌಡ ಮಾತನಾಡಿ, ಮಹಾರಾಜರು ದಸರಾ ಕ್ರೀಡಾ ಪರಂಪರೆಯನ್ನು ಹುಟ್ಟುಹಾಕಿ ಕ್ರೀಡೆಗೆ ಶಕ್ತಿಕೊಟ್ಟರು. ಕ್ರೀಡಾ ಇಲಾಖೆ ಒಳ್ಳೊಳ್ಳೆ ಕೆಲಸ ಮಾಡಿದೆ. 75 ಮಕ್ಕಳನ್ನು ದತ್ತು ಪಡೆದು ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡಲಾಗುತ್ತಿದೆ. ಈ ಮಕ್ಕಳಿಗೆ ತಲಾ 10 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 504 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಯೋಗವನ್ನು ಕ್ರೀಡೆಯಾಗಿ ಸೇರಿಸಿದ್ದೇವೆ. ಕ್ರೀಡೆಗೆ ಮತ್ತಷ್ಟು ಉತ್ತೇಜನ ಕೊಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net