

ಮೈಸೂರು ಚಲೋದಲ್ಲಿ ಚಂದು ಪಾಟೀಲ್ ನೇತೃತ್ವದಲ್ಲಿ ಕಲಬುರಗಿ ಬಿಜೆಪಿ ಟೀಂ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹಣದ ದಾಹದಲ್ಲಿ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಜನರ ಹಣವನ್ನು ಕಾಂಗ್ರೆಸ್ ನಾಯಕರು ಲೂಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರುವುದು ಸದನದಲ್ಲೇ ಸಿಎಂ ಒಪ್ಪಿಕೊಂಡಿದ್ದಾರೆ. ಮೂಡಾ ಹಗರಣ ನಡೆದಿದೆ. ವರ್ಗಾವಣೆ ದಂಧೆ ಎಗ್ಗಿಲ್ಲದೆ ಸಾಗಿದ್ದು, ಅಧಿಕಾರಿಗಳನ್ನು ಭ್ರಷ್ಟರನ್ನಾಗಿಸಿ, ಹಣ ವಸೂಲಿ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ನೈತಿಕ ಅಧಃಪತನಕ್ಕೆ ಇಳಿದಿದೆ. ಜನಸಾಮಾನ್ಯರ ನೋವುಗಳನ್ನು ಅರಿಯುವವರೇ ಇಲ್ಲದಂತಾಗಿದೆ. ಎಲ್ಲ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸಣ್ಣಪುಟ್ಟ ಕೆಲಸಗಳಿಗೂ ಲಂಚ ಕೇಳಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದಕ್ಕೆ ಯಾದಗಿರಿಯ ನಿಷ್ಠಾವಂತ ಅಧಿಕಾರಿ ಪಿಎಸ್‌ಐ ಪರಶುರಾಮ ಸಾವು ಸಾಕ್ಷಿಯಾಗಿದೆ. ಇಂತಹ ಹಲವು ಅಕ್ರಮ ಪ್ರಕರಗಳು ಹೊರಬಂದರೂ ಸರ್ಕಾರ ನಾಚಿಗೆ ಬಿಟ್ಟು ವರ್ತಿಸುತ್ತಿದೆ ಎಂದು ಖಂಡಿಸಿದರು.
ಮೈಸೂರು ಚಲೋ ಪಾದಯಾತ್ರೆಯ ಮೊದಲ ದಿನದಿಂದಲೂ ಕಲಬುರಗಿ ನಗರ ಬಿಜೆಪಿ ತಂಡವು ಚಂದು ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಎನ್‌ಡಿಎ ಒಕ್ಕೂಟದ ನಾಯಕರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.