

ಬೆಂಗಳೂರು: ಸುಗಮ ಸಂಚಾರ ವ್ಯವಸ್ಥೆಗಾಗಿ ಮೈಸೂರು ರಸ್ತೆಯಲ್ಲಿರುವ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನ ಮುಂಭಾಗ ನಿರ್ಮಿಸಲಾಗಿರುವ ರೈಲ್ವೆ ಅಂಡರ್ಪಾಸ್ ಸಾರ್ವಜನಿಕ ಸೇವೆಗೆ ಬಳಕೆಯಾಗದೆ, ಸಮಸ್ಯೆಗಳ ಕೂಪವಾಗಿ ಬದಲಾಗಿದೆ.
ಕೆಳಸೇತುವೆ ನಿರ್ಮಾಣಗೊಂಡು ವರ್ಷಗಳೇ ಕಳೆದಿದ್ದರೂ ವಾಹನ ಸಂಚಾರ ಮಾತ್ರ ಇನ್ನೂ ಆರಂಭವಾಗಿಲ್ಲ. ಪಕ್ಕದಲ್ಲಿ ಸರ್ವಿಸ್ ರಸ್ತೆಯೂ ನಿರ್ಮಾಣಗೊಳ್ಳದೆ ಸುತ್ತಮುತ್ತಲ ನಿವಾಸಿಗಳು ನಿತ್ಯ ಸಮಸ್ಯೆ ಎದುರಿಸಬೇಕಾಗಿದೆ. ಅವೈಜ್ಞಾನಿಕ ಕಾಮಗಾರಿಯೇ ಪ್ರಸ್ತುತ ಸ್ಥಿತಿಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೆಲವರು ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ಜತೆಗೆ ವ್ಯಾಪಾರಿಗಳು ತ್ಯಾಜ್ಯಗಳನ್ನು ತಂದು ಸುರಿದ ಪರಿಣಾಮ ಸೇತುವೆ ಆಸುಪಾಸಿನಲ್ಲೆಲ್ಲ ಕಸದ ರಾಶಿ ಸೃಷ್ಟಿಯಾಗಿದೆ. ಸಮರ್ಪಕವಾಗಿ ವಿಲೇವಾರಿ ಆಗದಿದ್ದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಸ್ಥಳಿಯರು ಅಲವತ್ತುಕೊಂಡಿದ್ದಾರೆ.
ಅಂಡರ್ಪಾಸ್ನಲ್ಲಿ ಮಳೆನೀರು ನಿಂತುಕೊಳ್ಳುತ್ತಿದೆ. ಹತ್ತಿರದಲ್ಲಿರುವ ಒಳಚರಂಡಿ ತೆರೆದುಕೊಂಡಿದ್ದು, ಅಲ್ಲಿನ ತ್ಯಾಜ್ಯ ನೀರು ಹರಿದುಬರುತ್ತಿದೆ. ಇದರಿಂದ ಜನರು ಮೂಗು ಮುಚ್ಚಿಕೊಂಡೇ ಓಡಾಡಬೇಕಿದೆ. ಹತ್ತಿರದಲ್ಲಿರುವ ಅಪಾರ್ಟ್ಮೆಂಟ್ ನಿವಾಸಿಗಳಿಗೆ ದುರ್ನಾತ ತಪ್ಪಿದ್ದಲ್ಲ ಎಂದು ಸುತ್ತಮುತ್ತಲ ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.