

ಹನೂರು: ಪಟ್ಟಣದ ಶ್ರೀ ಮಹಿಷಾಸುರ ಮರ್ದಿನಿ (ಮೈಸೂರು ಮಾರಮ್ಮ) ದೇಗುಲದಲ್ಲಿ ನವರಾತ್ರಿಯ ಅಂಗವಾಗಿ ಕಳೆದ 9 ದಿನಗಳಿಂದ ಪಟ್ಟದಲ್ಲಿ ಕೂರಿಸಲಾಗಿದ್ದ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯು ಗುರುವಾರ ವಿಜೃಂಭಣೆಯಿಂದ ನೆರವೇರಿತು.
ನವರಾತ್ರಿಯ ಅಂಗವಾಗಿ ಪ್ರತಿ ವರ್ಷ ಮಹಿಷಾಸುರ ಮರ್ದಿನಿ ದೇಗುಲದಲ್ಲಿ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜೆ ಸಲ್ಲಿಸಿ 9 ದಿನಗಳ ಕಾಲ ಪಟ್ಟಕ್ಕೆ ಕೂರಿಸುವುದು ಹಾಗೂ ಪ್ರತಿನಿತ್ಯ ಪೂಜೆಯನ್ನು ಸಲ್ಲಿಸಿ ವಿಜಯದಶಮಿಯಂದು ಪಟ್ಟಣದಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆದೊಯ್ದು ಬನ್ನಿಮರದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ.
ಈ ಹಿನ್ನೆಲೆಯಲ್ಲಿ ದೇಗುಲದಲ್ಲಿ ಬೆಳಗ್ಗೆ ದೇವಿಗೆ ಹಾಲು, ಮೊಸರು, ಬೆಣ್ಣೆ, ಜೇನುತುಪ್ಪ, ಎಳನೀರು, ಪನ್ನೀರು, ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 2.30ರಲ್ಲಿ ಮಹಿಷಾಸುರ ಮರ್ದಿನಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಹಳೇ ಎಂಡಿಸಿಸಿ ರಸ್ತೆ, ಬಸ್ ನಿಲ್ದಾಣ, ಬಂಡಳ್ಳಿ ರಸ್ತೆ, ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದ ಮೂಲಕ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಬನ್ನಿಮಂಟಪ ಬಡಾವಣೆಯಲ್ಲಿರುವ ಬನ್ನಿಮರಕ್ಕೆ ಮೆರವಣಿಗೆ ಮೂಲಕ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಉತ್ಸವ ಮೂರ್ತಿಗೆ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ದೇವಾಲಯಕ್ಕೆ ಕರೆ ತರಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ನೆರೆದಿದ್ದು, ಜಯಘೋಷವನ್ನು ಮೊಳಗಿಸಿದರು. ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.