Mysore Dasara| ಸರ್ಕಾರಕ್ಕೆ ಅಂಬಾರಿ ಹಸ್ತಾಂತರಿಸಲು ವಿಳಂಬ; ರಾಜವಂಶಸ್ಥೆ ಪ್ರಮೋದಾದೇವಿ ಹೇಳಿದ್ದಿಷ್ಟು

Mysore Dasara
Published on

ಮೈಸೂರು: 2024ನೇ ಸಾಲಿನ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ (Mysore Dasara) ಅದ್ಧೂರಿಯಾಗಿ ಸಂಪನ್ನಗೊಂಡಿದ್ದು, ಜಂಬೂಸವಾರಿ (Jamboo Savari) ಮೆರವಣಿಗೆಯ ವೈಭೋಗ ಲಕ್ಷಾಂತರ ಜನರ ಹೃದಯವನ್ನ ಸ್ಫರ್ಶಿಸಿತು. ಜಂಬೂ ಸವಾರಿ ಬಳಿಕ ಗಜಪಡೆ ರಿಲ್ಯಾಕ್ಸ್​ ಮೂಡ್​ನಲ್ಲಿದ್ದು, ಸಾಂಸ್ಕೃತಿಕ ನಗರಿಯನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. 10 ದಿನಗಳ ಕಾಲ ಅದ್ಧೂರಿಯಾಗಿ ನಡೆದ ದಸರಾ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ಇದೀಗ ಚಿನ್ನದ ಅಂಬಾರಿಗೆ (Ambari) ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದೆ.

ಶನಿವಾರ (ಅಕ್ಟೋಬರ್​ 13) ನಡೆದ ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಗೆಂದು ಚಿನ್ನದ ಅಂಬಾರಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್​ (Pramoda Devi Wadiyar) ಅವರು ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಮೆರವಣಿಗೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅಂದರೆ ಮಧ್ಯಾಹ್ನ 2.05ಕ್ಕೇ ಅಂಬಾರಿ ಹಸ್ತಾಂತರಿಸಲಾಯಿತು. ಮೆರವಣಿಗೆಯ ಸಂದರ್ಭದಲ್ಲಿ ಅಭಿಮನ್ಯು ಆನೆಯು ಚಿನ್ನದ ಅಂಬಾರಿಯನ್ನು ಸಾಗಿಸುವಲ್ಲಿ ಹಾಗೂ ಮುಹೂರ್ತದೊಳಗೆ ಪುಷ್ಪಾರ್ಪಣೆ ಮಾಡಲು ಆಗಿರುವ ವಿಳಂಬಕ್ಕೆ ನಾವು ಕಾರಣವಲ್ಲ. ಎಲ್ಲವನ್ನೂ ಸೂಕ್ಷ್ಮವಾಗಿ ನಿರ್ವಹಿಸಲು, ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಮತ್ತು ಅಂಬಾರಿ ಸಿದ್ಧವಾಗಿದ್ದರೂ, ಅದನ್ನು ಸ್ಥಳಾಂತರಿಸಲು ಸಂಬಂಧಿಸಿದ ಸಿಬ್ಬಂದಿಗೆ ತೊಂದರೆಯಾಯಿತು.

Pramoda Devi Wadiyar

ಎಲ್ಲವನ್ನೂ ಸೂಕ್ಷ್ಮವಾಗಿ ನಿರ್ವಹಿಸಲು, ಕಾರ್ಯಕ್ರಮವನ್ನು ನಡೆಸಲು ಮತ್ತು ಅಂಬಾರಿ ಸಿದ್ಧವಾಗಿದ್ದರೂ, ಅದನ್ನು ಸ್ಥಳಾಂತರಿಸಲು ಸಂಬಂಧಿಸಿದ ಸಿಬ್ಬಂದಿಗೆ ತೊಂದರೆಯಾಯಿತು. ಜನಸಂದಣಿಯ ಕಳಪೆ ನಿರ್ವಹಣೆಯೂ ಇದಕ್ಕೆ ಕಾರಣವಾಯಿತು. ಕೆಲವು ಸರ್ಕಾರಿ ಕಾರ್‌ಗಳು ಮತ್ತು ಸರ್ಕಾರಿ ಅತಿಥಿಗಳು ಹಾಗೂ ಪಾಲ್ಗೊಳ್ಳುವವರನ್ನು ಕರೆತಂದ ಖಾಸಗಿ ಬಸ್‌ ಅಂಬಾರಿ, ಆನೆಗಳು ಸಾಗುವ ಮಾರ್ಗದಲ್ಲಿ ನಿಂತಿದ್ದರಿಂದ ತೊಂದರೆಯಾಯಿತು. ಅಂಬಾರಿಯನ್ನು ಅನೆ ಮೇಲೆ ಕಟ್ಟುವ ಸ್ಥಳಕ್ಕೆ ಸಾಗಿಸಲು ಹಾಗೂ ಅಭಿಮನ್ಯುವಿನ ಮೇಲೆ ಕಟ್ಟಲು ಸಿಬ್ಬಂದಿಗೆ ಕಷ್ಟವಾಯಿತು. ಇದು ನನಗೆ ಆತಂಕವನ್ನುಂಟು ಮಾಡಿದೆ.

ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸವಾಗಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಸಂಬಂಧಿಸಿದವರಿಗೆ ಅನಗತ್ಯ ಆತಂಕ ಉಂಟಾಗುವುದನ್ನು ತಪ್ಪಿಸಬೇಕು. ಅಂಬಾರಿ ಹಸ್ತಾಂತರದ ಸಮಯದ ಬಗ್ಗೆ ಉಂಟಾಗಿರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಲು ಈ ಹೇಳಿಕೆ ನೀಡಿದ್ದೇನೆ. ಇದರಲ್ಲಿ ಯಾವುದೇ ಅಪರಾಧವಾಗಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್​ (Pramoda Devi Wadiyar) ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net