ಮಕ್ಕಳ ಕಣ್ಣಿನ ಸಮಸ್ಯೆ ಜಾಗೃತಿಗೆ ‘ಮಯೋಪಿಯಾ ಓಟ’

Raghu_18_Myopia_Run_Press_Meet_@_Narayana_Netralaya (1)
Published on

ಬೆಂಗಳೂರು: ಮಕ್ಕಳಲ್ಲಿ ಕಂಡುಬರುವ ಸಮೀಪ ದೃಷ್ಟಿ (ಮಯೋಪಿಯಾ) ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಲು ನಾರಾಯಣ ನೇತ್ರಾಲಯ ವತಿಯಿಂದ ಮಹಾತ್ಮ ಗಾಂಧಿ ರಸ್ತೆಯ ರಾಜೇಂದ್ರ ಸಿಂಗ್‌ಜಿ ಸೇನಾಧಿಕಾರಿಗಳ ಸಂಸ್ಥೆಯಲ್ಲಿ 28ರಂದು ‘ಮಯೋಪಿಯಾ ಓಟ’ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 7.30ರಿಂದ 11ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಮಯೋಪಿಯಾ ಕುರಿತು ಜಾಗೃತಿ ಮೂಡಿಸಲು ಮ್ಯಾಜಿಕ್ ಶೋ, ಪೇಂಟಿಂಗ್, ಬೌನ್ಸಿ ಕ್ಯಾಸಲ್, ಮಕ್ಕಳಿಗೆ ಮನರಂಜನೆ ಮತ್ತು ಶೈಕ್ಷಣಿಕ ಆಟಗಳು, ಜಾನಪದ ಅಕಾಡೆಮಿಯಿಂದ ಕಲಾ ಪ್ರದರ್ಶನ ಹಾಗೂ ಮಕ್ಕಳಿಗೆ ಆರೋಗ್ಯಕರ ತಿಂಡಿಗಳು ಮತ್ತು ಪೌಷ್ಟಿಕಾಂಶಗಳ ಬಗ್ಗೆ ಸಲಹೆ ನೀಡಲಾಗುವುದು ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಯೋಪಿಯಾ ಆನುವಂಶಿಕ ಹಾಗೂ ಚಟುವಟಿಕೆರಹಿತ ಜೀವನಶೈಲಿಯಿಂದ ಬರುವ ಅಪಾಯಕಾರಿ ದೃಷ್ಟಿ ಸಮಸ್ಯೆಯಾಗಿದೆ. ಇದು ಜಾಗತಿಕ ಸಾಂಕ್ರಾಮಿಕ ಕಾಯಿಲೆಯಾಗಿದ್ದು, 2050ರ ವೇಳೆಗೆ ವಿಶ್ವದ ಶೇ.50 ಜನರ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಪ್ರತಿ ನಾಲ್ಕು ಮಕ್ಕಳಲ್ಲಿ ಒಂದು ಮಗುವಿಗೆ ಮಯೋಪಿಯಾ ಬಾಧಿಸುತ್ತಿದ್ದು, ವಯಸ್ಸು ಹೆಚ್ಚಾದಂತೆ ಸಮಸ್ಯೆ ಉಲ್ಬಣಿಸುತ್ತದೆ ಎಂದು ವಿವರಿಸಿದರು.

ಆರಂಭದಲ್ಲೇ ಸಮಸ್ಯೆ ಗುರುತಿಸಿ: ಮಯೋಪಿಯಾ ಸಮಸ್ಯೆಯ ಪರಿಹಾರಕ್ಕಾಗಿ ಮಕ್ಕಳು ಹೆಚ್ಚಾಗಿ ಗ್ಯಾಜೆಟ್‌ಗಳನ್ನು ಅವಲಂಬಿಸದೆ ಹೊರಾಂಗಣ ಆಟ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕು. ನಿತ್ಯ 2 ತಾಸಿಗೂ ಕಡಿಮೆ ಟಿ.ವಿ., ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆ ಮಾಡುವುದು ಸೂಕ್ತ ಎಂದು ನಾರಾಯಣ ನೇತ್ರಾಲಯದ ಮಕ್ಕಳ ನೇತ್ರತಜ್ಞೆ ಡಾ. ಬಿ.ಎ. ಮೈತ್ರಿ ತಿಳಿಸಿದರು.

ಕೋಟ್:

ಮಯೋಪಿಯಾ ವಿರುದ್ಧ ಹೋರಾಡುವಲ್ಲಿ ನಾರಾಯಣ ನೇತ್ರಾಲಯವು ಮುಂಚೂಣಿಯಲ್ಲಿದೆ. ಇಲ್ಲಿ ಸುಧಾರಿತ ರೋಗನಿರ್ಣಯ ಮತ್ತು ಚಿಕಿತ್ಸೆಯ ಸೌಲಭ್ಯವಿದ್ದು, ಮಕ್ಕಳು 18 ವರ್ಷ ತಲುಪುವುದರಲ್ಲಿ ಮಯೋಪಿಯಾದಿಂದ ಪರಿಹಾರ ಹೊಂದಬಹುದಾಗಿದೆ.

ಎಸ್.ಕೆ. ಮಿತ್ತಲ್, ನಾರಾಯಣ ನೇತ್ರಾಲಯದ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net