ಸಂಘದ ಅಭಿವೃದ್ಧಿಯೇ ನನ್ನ ಗುರಿ

oplus_2097152
oplus_2097152
Published on

ಕಂಪಲಾಪುರ: ಸಮೀಪದ ದೊಡ್ಡ ಬೇಲಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಬುಧವಾರ ಸಂಘದ ಆಭರಣದಲ್ಲಿ ನಡೆಯಿತು.

ಅಧ್ಯಕ್ಷ ಆರ್.ಎಸ್.ಮಹದೇವ್ ಮಾತನಾಡಿ, ಸಂಘದಲ್ಲಿ 265 ಸುಸ್ತಿದಾರರಿಂದ 3 ಕೋಟಿ 80 ಲಕ್ಷ ರೂ.ಸಾಲ ವಸೂಲಾಗಬೇಕಾಗಿದ್ದು, ಈಗಾಗಲೇ ಅವರಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಮೂರನೇ ಬಾರಿ ನೋಟಿಸ್ ಜಾರಿ ಮಾಡುತ್ತಿದ್ದು, ಸಾಲ ಪಾವತಿಸದಿದ್ದರೆ ಅವರ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ತಿಳಿಸಿದರು.

ನನ್ನ ಅವಧಿಯಲ್ಲಿ ರೈತರಿಗೆ ಯಾವುದೇ ಅನ್ಯಾಯವಾಗದಂತೆ ಆಡಳಿತ ಮಂಡಳಿಯನ್ನು ವಿಶ್ವಾಸ ತೆಗೆದುಕೊಂಡು ಸಂಘವನ್ನು ಲಾಭದತ್ತ ತೆಗೆದುಕೊಂಡು ಹೋಗುವುದು ನನ್ನ ಗುರಿ. ನಮ್ಮ ಸಂಘದಲ್ಲಿ ಆದಷ್ಟು ಎಲ್ಲ ರೈತರಿಗೂ ಸಾಲ ನೀಡಿದ್ದು ಬಾಕಿ ಉಳಿದಿರುವ ರೈತರು ಮುಂದಿನ ಎರಡು ದಿನಗಳಲ್ಲಿ ಸಾಲ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಸಂಘದಲ್ಲಿ ಕೆ.ಶಿವಣ್ಣ ಎಂಬುವರ ಸದಸ್ಯತ್ವ ರದ್ದು ಸಂಬಂಧ ವಿಚಾರಣೆ ಕೋರ್ಟ್ ಅಂಗಳದಲ್ಲಿದೆ. ಆದರೂ ಶಿವಣ್ಣ ಅವರು ವೇದಿಕೆ ಮೇಲೆ ಕುಳಿತ್ತಿದ್ದು, ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದೀರಿ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವಿಚಾರವಾಗಿ ಒಂದು ಗಂಟೆಗೂ ಹೆಚ್ಚು ಕಾಲ ವಾಗ್ವಾದ ನಡೆಯಿತು.

ನಂತರ ಎದ್ದು ನಿಂತು ಅಧ್ಯಕ್ಷ ಮಹದೇವ್ ನಾವು ಕಾನೂನನ್ನು ಉಲ್ಲಂಘಿಸಿದ್ದೇ ಆಗಿದ್ದಲ್ಲಿ ನಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಿ. ದಯವಿಟ್ಟು ಈ ಸಭೆ ನಡೆಯಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ವಾಗ್ವಾದ ಜೋರಾಗುತ್ತಿದ್ದಂತೆ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ವಿ.ಗೋವಿಂದರಾಜ್ ಪರಿಸ್ಥಿತಿ ತಿಳಿಗೊಳಿಸಿದರು.

ಬಳಿಕ ಸಿಇಒ ರವಿ ಸಭೆಯ ವಾರ್ಷಿಕ ವರದಿ ಓದಿದರು. ನಮ್ಮ ಸಂಘವು 2024-25ನೇ ಸಾಲಿಗೆ 5.12 ಲಕ್ಷ ನಿವ್ವಳ ಲಾಭಗಳಿಸಿದೆ. ಸಂಘದಲ್ಲಿ 1850 ಷೇರುದಾರರಿದ್ದು, 619 ಜನರಿಗೆ 9 ಕೋಟಿ 65 ಲಕ್ಷ ರೂ. ಸಾಲ ನೀಡಲಾಗಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಕೃಷ್ಣ, ನಿರ್ದೇಶಕರಾದ ಮಹೇಶ್, ರಮೇಶ್, ಅಣ್ಣೇಗೌಡ ಬಸವರಾಜ ಅರಸ್, ಕುಮಾರ್, ಲಕ್ಷ್ಮಿಕಾಂತ್ ರಾಜ್ ಅರಸ್, ಮಹದೇವ ನಾಯಕ, ವೀರಭದ್ರ, ಕನಕಮ್ಮ, ಸಾವಿತ್ರಮ್ಮ, ಮುಖಂಡರಾದ ವಿಜಿ ಕೊಪ್ಪಲು ಲೋಕೇಶ್, ಚಲುವಯ್ಯ, ಸಣ್ಣ ತಮ್ಮೇಗೌಡ, ಲೋಕಪಾಲಯ್ಯ, ಹರೀಶ್ ಅರಸ್ ಸೇರಿದಂತೆ ಸಿಬ್ಬಂದಿ ಶ್ರೀಧರ್, ಸುಷ್ಮಾ, ಅರುಣ್ ಹಾಗೂ ರೈತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net