

ಚಿಂತಾಮಣಿ: ನಗರ ಮತ್ತು ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಭಾನುವಾರ ಸುರಿದ ಜಿಟಿಜಿಟಿ ಮಳೆಯಿಂದಾಗಿ ಚಳಿ ಹೆಚ್ಚಾಗಿದೆ. ಸೋಮವಾರ, ಮಂಗಳವಾರ ಮುಂಜಾನೆ 8 ಗಂಟೆವರೆಗೂ ದಟ್ಟ ಮಂಜು ಆವರಿಸಿದ್ದರ ಜತೆಗೆ ಶೀತ ಗಾಳಿ, ಮೈಕೊರೆಯುವ ಚಳಿ ಜನರನ್ನು ಹೌಹಾರುವಂತೆ ಮಾಡಿದೆ. ಸೂರ್ಯನ ದರ್ಶನವಾಗಿ ಬಿಸಿಲಿಗೆ ನಿಂತರೂ ಮೈಗೆ ಚಳಿಯ ಸ್ಪರ್ಶ ತಾಕುತ್ತಿದೆ.
ದಟ್ಟ ಮಂಜು ಆವರಿಸುತ್ತಿರುವುದರಿಂದ ವಾಹನ ಸವಾರರಿಗೆ ರಸ್ತೆ ಕಾಣಿಸದಂತಹ ಸ್ಥಿತಿ ನಿರ್ಮಾಣವಾಗಿದ್ದು, ಚಳಿಯಿಂದಾಗಿ ಮನೆಮಂದಿ ಹೊರಬರಲು ತುಸು ಯೋಚಿಸುವಂತಾಗಿದೆ. ಸದಾ ಸಾರ್ವಜನಿಕರಿಂದ ತುಂಬಿರುತ್ತಿದ್ದ ಸರ್ಕಾರಿ ಕಚೇರಿಗಳಲ್ಲಿ ಜನ ಕಡಿಮೆ ಇದ್ದು, ಬೆಳಗ್ಗೆ, ಸಂಜೆ ಶೀತ ಗಾಳಿಗೆ ವಿಪರೀತ ಚಳಿ ಇರುವುದರಿಂದ ಮಕ್ಕಳು, ವೃದ್ಧರ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಬೆಳಗ್ಗೆ, ಸಂಜೆ ವಾಯುವಿಹಾರಕ್ಕೆ ಹೋಗುವವರು ಸ್ವೆಟರ್, ಟೋಪಿ ಧರಿಸಿ ಓಡಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಕೆಲಸಕ್ಕಾಗಿ ಬೇರೆ ಕಡೆ ಹೋಗುವ ಜನ ಬಸ್, ಕಾರಿನಲ್ಲಿ ಸಂಚರಿಸುತ್ತಿದ್ದು, ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರ ವಿರಳವಾಗಿದೆ. ಸ್ವೆಟರ್, ಟೋಪಿ, ಜರ್ಕಿನ್‌ಗಳ ವ್ಯಾಪಾರ ಹಾಗೂ ಬಿಸಿಬಿಸಿ ಟೀ, ಕಾಫಿ, ಬಜ್ಜಿ ಬೋಂಡಾ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿದೆ. ರಾತ್ರಿ ಸಮಯದಲ್ಲಿ ಕಾರ್ಮಿಕರು ಚಳಿಯಿಂದ ರಕ್ಷಣೆ ಪಡೆಯಲು ಬೆಂಕಿ ಕಾಯಿಸುವ ದೃಶ್ಯ ಕಂಡುಬರುತ್ತಿವೆ. ಜನನಿಬಿಡದ ಮಾರುಕಟ್ಟೆಗಳು ಬೆಳಗಿನ ಸಮಯದಲ್ಲಿ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.
ವಾತಾವರಣದಲ್ಲಿ 17ರಿಂದ 21 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ. ಇನ್ನೂ ಒಂದು ವಾರ ಇದೇ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಕ್ಕಳು, ವಯಸ್ಸಾದವರು ಬೆಚ್ಚಗಿನ ಉಡುಪು ಧರಿಸಬೇಕು. ಬಿಸಿ ಆಹಾರ ಸೇವನೆ ಮಾಡಬೇಕು. ಅನಗತ್ಯವಾಗಿ ತಿರುಗಾಡದೆ ಅನಿವಾರ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಮಧುಮೇಹ, ಬಿಪಿ, ಹೃದಯ ಸಂಬಂಧಿ ಕಾಯಿಲೆ ಇರುವವರು ವಾಯುವಿಹಾರಕ್ಕೆ ತೆರಳದೆ ಯೋಗ ಮತ್ತು ಲಘು ವ್ಯಾಯಾಮ ಮಾಡಿಕೊಂಡು ಮನೆಯಲ್ಲಿ ಇರಬೇಕು. ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆರೋಗ್ಯ ಇಲಾಖೆ ತಿಳಿಸಿದೆ.