

ಯಳಂದೂರು: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಪಟ್ಟಣದ ಜಾಮೀಯ ಮಸೀದಿ ಮುಂಭಾಗದ ರಸ್ತೆಯಲ್ಲಿ ಶುಕ್ರವಾರ ಮುಸ್ಲಿಮರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ಮುಸ್ಲಿಂ ಸಮುದಾಯದ ಮುಖಂಡ ನಯಾಜ್ ಖಾನ್ ಮಾತನಾಡಿ, ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಇಡೀ ರಾಷ್ಟ್ರವೇ ಖಂಡಿಸುತ್ತಿದೆ. ಇದೊಂದು ಅವೈಜ್ಞಾನಿಕ ಕಾಯ್ದೆಯಾಗಿದೆ. ಅಲ್ಪಸಂಖ್ಯಾತರಾಗಿರುವ ಮುಸ್ಲಿಮರನ್ನು ಹತ್ತಿಕ್ಕುವ ಕೆಲಸವನ್ನು ರಾಷ್ಟ್ರದಲ್ಲಿ ಮಾಡಲಾಗುತ್ತಿದೆ. ನಮ್ಮನ್ನು ದುರ್ಬಲಗೊಳಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಪ್ರತಿ ನಾಗರಿಕರಿಗೂ ಸಮಾನ ಹಕ್ಕುಗಳಿವೆ. ಇದನ್ನು ಸಹಿಸಿಕೊಳ್ಳದ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಾದ ಮುಸ್ಲಿಮರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇವರ ಪ್ರತಿ ನಡೆಯಲ್ಲೂ ಸಂವಿಧಾನ ವಿರೋಧಿ ನೀತಿಗಳಿವೆ. ಈ ಕಾಯ್ದೆ ಜಾರಿಯಾದಲ್ಲಿ ಅಲ್ಪಸಂಖ್ಯಾತರಿಗೆ ಅನೇಕ ತೊಂದರೆಗಳು ಉಂಟಾಗುತ್ತದೆ ಎಂದರು.
ವಕ್ಫ್ ಕಾಯ್ದೆಯ ವಿರುದ್ಧ ರಾಷ್ಟ್ರಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನಮ್ಮ ರಾಜ್ಯದಲ್ಲೂ ಪ್ರತಿ ಜಿಲ್ಲಾ, ತಾಲೂಕು, ಗ್ರಾಮೀಣ ಭಾಗದಲ್ಲಿ ಈ ಕಾಯ್ದೆಯ ವಿರೋಧಿ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ನಿರ್ದೇಶನದಂತೆ ಪ್ರತಿ ಕಡೆಯಲ್ಲೂ ಇಂದು ಮಾನವ ಸರಪಳಿಯನ್ನು ನಿರ್ಮಿಸಿ ಈ ನೂತನ ವಕ್ಫ್ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕೆಂದು ಪ್ರತಿಭಟನೆ ನಡೆಸಲಾಗುತ್ತಿದೆ. ಅದರಂತೆ ಯಳಂದೂರು ಪಟ್ಟಣದ ಜಾಮೀಯ ಮಸೀದಿಯ ಮುಂಭಾಗದ ಜೋಡಿ ರಸ್ತೆಯಲ್ಲಿ ಶುಕ್ರವಾರ ವಿಶೇಷ ನಮಾಜ್‌ನ ನಂತರ ನಾವು 15 ನಿಮಿಷಗಳ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟನೆ ನಡೆಸಿದ್ದೇವೆ ಎಂದರು.
ಮುಸ್ಲಿಂ ಧರ್ಮಗುರುಗಳಾದ ಅಬ್ರಾರ್ ಅಹಮ್ಮದ್, ಪಪಂ ನಾಮನಿರ್ದೇಶಿತ ಸದಸ್ಯ ಮುನವ್ವರ್ ಬೇಗ್, ಇರ್ಫಾನ್, ಜಮೀರ್, ಮುನವ್ವರ್ ಸೇರಿದಂತೆ ನೂರಾರು ಮುಸ್ಲಿಮರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.