

ಬೆಂಗಳೂರು: ಕಳೆದ ನೂರು ವರ್ಷಗಳಲ್ಲಿ ಶ್ರೀಮಂತವಾಗಿ ಬೆಳೆದು ಬಂದಿರುವ ಸುಗಮ ಸಂಗೀತವನ್ನು ವಿಶ್ವವಿದ್ಯಾಲಯಗಳಲ್ಲಿ ಹೊಸ ಕೋರ್ಸ್ ಅಡಿಯಲ್ಲಿ ಕಲಿಸಲಾಗುವುದು ಎಂದು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಾಗೇಶ್ ಬೆಟ್ಟಕೋಟೆ ತಿಳಿಸಿದ್ದಾರೆ.
ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ಶನಿವಾರ ಎನ್.ಆರ್. ಕಾಲನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ "ಹಾಡು ಹೊಸ ಹಾಡು' ಹಾಗೂ ಸುಗಮ ಸಂಗೀತ: ಪಠ್ಯಕ್ರಮದ ಕರಡನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆನಂದ ಮಾದಲಗೆರೆ ಮಾತನಾಡಿ, ಸುಗಮ ಸಂಗೀತಕ್ಕೆ ಪಠ್ಯ ಅಳವಡಿಸುವ ನಿಟ್ಟಿನಲ್ಲಿ ಒಕ್ಕೂಟವು ಕಳೆದ 8 ವರ್ಷಗಳಿಂದ ನಿರಂತರವಾಗಿ ಕಮ್ಮಟಗಳನ್ನು ಆಯೋಜಿಸಲಾಗುತ್ತಿದೆ. ಈ ವೇಳೆ ಕ್ಷೇತ್ರದ ಹಿರಿಯ ಕವಿಗಳು ಹಾಗೂ ಗಾಯಕರಿಂದ ಸಲಹೆಗಳನ್ನು ಪಡೆದು ಅಂತಿಮ ಕರಡನ್ನು ಸಿದ್ಧಪಡಿಸಲಾಗಿದೆ ಎಂದರು.
ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ಸಂಸ್ಥೆಯ ಅಧ್ಯಕ್ಷ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಇತರರಿದ್ದರು.