

ವಿರಾಜಪೇಟೆ: ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ದಿನದ ಅಣಬೆ ಬೇಸಾಯದ ಕುರಿತ ಪ್ರಯೋಗಾತ್ಮಕ ಕಾರ್ಯಗಾರವು ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ, ಬಡತನದಲ್ಲಿ ಹುಟ್ಟುವುದು ತಪ್ಪಲ್ಲ. ಆದರೆ ಬಡವರಾಗಿ ಸಾಯುವುದು ನಮ್ಮ ತಪ್ಪು. ಪ್ರತಿಯೊಬ್ಬ ಮನುಷ್ಯ ಸಾಧಿಸುವ ಛಲವಿದ್ದರೆ ಹಲವಾರು ಅವಕಾಶಗಳಿವೆ ಎಂದು ಹೇಳಿದರು.
ಆರ್ಥಿಕವಾಗಿ ಸಬಲರಾಗಲು ವಿವಿಧ ಮಾರ್ಗಗಳಿದ್ದು, ಅದರಲ್ಲಿ ಅಣಬೆ ಬೇಸಾಯವು ಒಂದು. ಇದನ್ನು ಅರೆಕಾಲಿಕ ವೃತ್ತಿಯಾಗಿ ತೆಗೆದುಕೊಂಡು ಸ್ವ-ಉದ್ಯೋಗ ಪರಿಕಲ್ಪನೆಯಲ್ಲಿ ತಮ್ಮ ವಿದ್ಯಾಭ್ಯಾಸದೊಂದಿಗೆ ವಿದ್ಯಾರ್ಥಿಗಳು ರೂಢಿಸಿಕೊಂಡು ಅಣಬೆ ಬೇಸಾಯವನ್ನು ಆರಂಭಿಸಿದರೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದರೊಂದಿಗೆ ಸ್ವಉದ್ಯೋಗ ಮಾಡಬಹುದೆಂದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಲಕ್ಷ್ಮೀಸಾಗರ್ ಮಾತನಾಡಿ, ಅಣಬೆ ಬೇಸಾಯವನ್ನು ಪೂರ್ಣಕಾಲಿಕ ಹಾಗೂ ಅರೆಕಾಲಿಕ ವೃತ್ತಿಯಾಗಿ ತೆಗೆದುಕೊಳ್ಳಬಹುದು. ಇದರಲ್ಲಿ ನಾವು ನೂರು ರೂಪಾಯಿಯನ್ನು ಹೂಡಿಕೆ ಮಾಡಿದರೆ 500 ರೂ. ಲಾಭವನ್ನು ಗಳಿಸಬಹುದು. ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವುದರೊಂದಿಗೆ ಆರ್ಥಿಕವಾಗಿ ಸಬಲರಾಗಲು ಇದೊಂದು ಉತ್ತಮ ವೃತ್ತಿಯೆಂದರು.
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಅಣಬೆ ಬೇಸಾಯ ವಿಭಾಗದ ಪ್ರಯೋಗಾಲಯ ಸಹಾಯಕ ವೀಣಾ ಅಶೋಕ್ ಮಾತನಾಡಿ, ಅಣಬೆ ಬೇಸಾಯದಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಅಣಬೆಯನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಉಪಯೋಗಗಳೊಂದಿಗೆ ಬೆಳೆದಂತಹ ಅಣಬೆಗಳನ್ನು ಹೇಗೆ ಮೌಲ್ಯಯುತ ವಸ್ತುಗಳಾಗಿ ಬದಲಾವಣೆ ಮಾಡಬೇಕೆಂಬುದರ ಕುರಿತು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಅಣಬೆ ಬೆಳೆಗಾರ ಸಿ.ಎ.ಮಾದಪ್ಪ ಹಾಗೂ ಆಶಾ ಮಾದಯ್ಯ ವಿದ್ಯಾರ್ಥಿಗಳಿಗೆ ಅಣಬೆ ಬೇಸಾಯದ ವಿಧಾನವನ್ನು ವಿವರಣಾತ್ಮಕವಾಗಿ ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಿಕೊಟ್ಟರು. ನಂತರ ವಿದ್ಯಾರ್ಥಿಗಳಿಂದ ಪ್ರಯೋಗಾತ್ಮಕವಾಗಿ ಅಣಬೆ ಬೇಸಾಯವನ್ನು ಮಾಡಿಸಲಾಯಿತು.
ಐಕ್ಯೂಎಸಿ ಸಂಚಾಲಕಿ ಪ್ರಿಯ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಸಂಚಾಲಕ ನಾಗರಾಜು ಇದ್ದರ. ಈ ಕಾರ್ಯಗಾರದಲ್ಲಿ ಕಾಲೇಜಿನ ಉಪನ್ಯಾಸಕ ನಿರ್ಮಿತಾ, ಬೊಜಮ್ಮ, ಸುನೀಲ್ ಕುಮಾರ್ ವಿದ್ಯಾರ್ಥಿಗಳು ಇದ್ದರು.