ನಿಮ್ಹಾನ್ಸ್‌ನಲ್ಲಿ ಮಿದುಳು ವಸ್ತುಸಂಗ್ರಹಾಲಯ -2026ಕ್ಕೆ ಸಾರ್ವಜನಿಕ ಪ್ರದರ್ಶನಕ್ಕೆ ಲಭ್ಯ

Museum of Brain and Mind - 3
Published on

ಪಂಕಜ ಕೆ.ಎಂ. ಬೆಂಗಳೂರು

ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ‘ಮಿದುಳು ಮತ್ತು ಮನಸ್ಸು ವಸ್ತುಸಂಗ್ರಹಾಲಯ’ (Museum of Brain and Mind) ಸ್ಥಾಪನೆ ಮಾಡುತ್ತಿದ್ದು, 2026ಕ್ಕೆ ಸಾರ್ವಜನಿಕ ಪ್ರದರ್ಶನಕ್ಕೆ ಲಭ್ಯವಾಗಲಿದೆ.

ನೂತನ ವಸ್ತುಸಂಗ್ರಹಾಲಯವನ್ನು ನಿಮ್ಹಾನ್ಸ್‌ನ ಹಳೆಯ ಕಟ್ಟಡದಲ್ಲಿ 30 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ 36 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದರ ಒಟ್ಟು ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇಕಡ 50 ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಆರ್‌ಆರ್ ನಿಧಿ ಅಡಿ ಶೇ. 50 ಅನುದಾನ ಭರಿಸಲಿವೆ.

ಈಗಾಗಲೇ ಅಸ್ತಿತ್ವದಲ್ಲಿರುವ ‘ಮಾನವ ಮಿದುಳು ಬ್ಯಾಂಕ್’ ( Human Brain Bank)  ಮತ್ತು ಮಿದುಳು ಮ್ಯೂಸಿಯಂ (Brain Museum) ಅನ್ನು ನೂತನವಾಗಿ ಆರಂಭಿಸಲಿರುವ ಮಿದುಳು ಮತ್ತು ಮನಸ್ಸು ವಸ್ತುಸಂಗ್ರಹಾಲಯ (Museum of Brain and Mind)

ದೊಂದಿಗೆ ಸಂಯೋಜಿಸಲಾಗುವುದು. ಆ ಮೂಲಕ ಇದು ವಿಶ್ವದ ಮೊದಲ ಅತಿದೊಡ್ಡ ಮತ್ತು ನವೀನ ವಸ್ತುಸಂಗ್ರಹಾಲಯ ಆಗಲಿದೆ ಎನ್ನುತ್ತಾರೆ ಮಾನವ ಮಿದುಳು ಬ್ಯಾಂಕ್ ಮತ್ತು ವಸ್ತುಸಂಗ್ರಹಾಲಯದ ಸಂಯೋಜಕಿ ಹಾಗೂ ನರರೋಗಶಾಸಜ್ಞೆ ಡಾ. ಅನಿತಾ ಮಹಾದೇವನ್.

ಸಮಗ್ರ ಮಾಹಿತಿ

ಈ ನೂತನ ವಸ್ತುಸಂಗ್ರಹಾಲಯದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಗ್ರಾಫಿಕ್ಸ್ ಮತ್ತು ಅನಿಮೇಷನ್, ವರ್ಚುವಲ್ ರಿಯಾಲಿಟಿ ಅಲ್ಲದೆ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿನ ವೃತ್ತಿಪರ ಪರಿಣತರನ್ನು ಸಂಯೋಜಿಸಲಾಗುತ್ತದೆ. ಮಿದುಳಿನ ಮಹತ್ವ ಮತ್ತು ರಕ್ಷಣೆ ಬಗ್ಗೆ ಸಂದರ್ಶಕರಿಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ.

ಕಾರ್ಯನಿರ್ವಹಣೆ ಹೇಗೆ?

ಮಾನವನ ದೇಹದಲ್ಲಿ ಮಿದುಳು ಹೇಗೆ ಕಾರ್ಯನಿರ್ವಹಿಸುತ್ತದೆ, ಮೋಟಾರ್ ಮತ್ತು ಸಂವೇದನಾ ಕಾರ್ಯಗಳನ್ನು ಹೇಗೆ ಸಂಯೋಜಿಸಲಾಗುತ್ತದೆ, ಪ್ರಜ್ಞೆಯನ್ನು ಹೇಗೆ ನಿರ್ವಹಿಸಲಾಗುತ್ತದೆ, ಆಲೋಚನೆಗಳು, ಕ್ರಿಯೆಗಳು ಮತ್ತು ಭಾವನೆಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ಜೀವನಶೈಲಿ ಮಿದುಳಿನ ಕಾರ್ಯವನ್ನು ಹೇಗೆ ಬದಲಾಯಿಸುತ್ತದೆ? ಎಂಬುದನ್ನು ಅರ್ಥಮಾಡಿಕೊಳ್ಳಲು ಈ ವಸ್ತುಸಂಗ್ರಹಾಲಯವು ಸಹಕಾರಿಯಾಗಲಿದೆ.

ವೈಶಿಷ್ಟ್ಯಗಳು

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮಿದುಳು ವಸ್ತುಸಂಗ್ರಹಾಲಯದಲ್ಲಿ ಮಾನವನ ಮಿದುಳಿನ 300ಕ್ಕೂ ಅಧಿಕ ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ. ಹಾಗೂ ಅಷ್ಟೇ ಸಂಖ್ಯೆಯ ಮಾದರಿಗಳನ್ನು ಮಾನವ ಮಿದುಳು ಬ್ಯಾಂಕ್‌ನಲ್ಲಿ ಸಂಗ್ರಹಿಸಲಾಗಿದೆ. ಇದರಲ್ಲಿ ಅರ್ಧದಷ್ಟು ನರಕ್ಷೀಣತೆ ಮತ್ತು ಮನೋವೈದ್ಯಕೀಯ ಅಸ್ವಸ್ಥತೆಯ ಪ್ರಕರಣಗಳನ್ನು ಹೊಂದಿದ್ದ ಮಿದುಳನ್ನು ಫ್ರೀಜ್ ಮಾಡಲಾಗಿದೆ. ಮತ್ತು ಉಳಿದ ಅರ್ಧವನ್ನು ಅಂದರೆ ಮಿದುಳಿನ ಟಿಶ್ಶುವನ್ನು ರೋಗಶಾಸ ಅಧ್ಯಯನಕ್ಕಾಗಿ ಬಳಕೆ ಮಾಡಲಾಗುತ್ತಿದೆ ಎಂದು ಡಾ. ಅನಿತಾ ಮಹಾದೇವನ್ ಮಾಹಿತಿ ನೀಡಿದರು.

1974ರಲ್ಲಿ ಬ್ಯಾಂಕ್ ಸ್ಥಾಪನೆ:

ಸಂಶೋಧನೆ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲೆಂದು 1974ರಲ್ಲಿ ನರರೋಗಶಾಸಜ್ಞ ಡಾ. ಎಸ್.ಕೆ. ಶಂಕರ ಅವರು ಮಾನವನ ಮಿದುಳು ಬ್ಯಾಂಕ್ ಪ್ರಾರಂಭಿಸಿದರು. ಇವರನ್ನು ‘ಭಾರತೀಯ ಮಿದುಳು ಬ್ಯಾಂಕ್‌ನ ಪಿತಾಮಹ’ ಎಂದೇ ಕರೆಯಲಾಗುತ್ತದೆ. ಈ ಬ್ಯಾಂಕ್ ಜತೆಗೆ 2010ರಲ್ಲಿ ವಸ್ತುಸಂಗ್ರಹಾಲಯವನ್ನು ಪ್ರಾರಂಭಿಸಲಾಯಿತು. ಅಲ್ಲಿಯವರೆಗೆ ಅಧ್ಯಯನ ಹಾಗೂ ಸಂಶೋಧನೆಗೆ ಸೀಮಿತವಾಗಿದ್ದ ಈ ಮಿದುಳು ಮಾದರಿಗಳ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಗ್ಲಿಯೋಮಾದಿಂದ ಕೇಂದ್ರ ನರಮಂಡಲದ ವಿವಿಧ ಸೋಂಕು ರೋಗಗಳು ಮತ್ತು ಆಪಘಾತ, ತಲೆಗೆ ಪೆಟ್ಟು ಸೇರಿ ಗಂಭೀರ ಗಾಯಗಳವರೆಗೆ ಮಿದುಳು ಮಾದರಿಗಳನ್ನು ಪ್ರತ್ಯೇಕಿಸಿ ಪ್ರದರ್ಶನಕ್ಕೆ ಇಡಲಾಗಿದೆ.

ಪ್ರದರ್ಶನ ಸಮಯ:

ಈ ವಸ್ತುಸಂಗ್ರಹಾಲಯ ಪ್ರತಿ ಬುಧವಾರ ಮತ್ತು ಶನಿವಾರ ಸಾರ್ವಜನಿಕರಿಗೆ ತೆರೆದಿರುತ್ತದೆ. ಹಾಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. (ಸಮಯ ಬೆಳಗ್ಗೆ 10.30 ರಿಂದ 12.30ರವರೆಗೆ) ವಿದ್ಯಾರ್ಥಿಗಳ ಭೇಟಿಗಾಗಿ nimhansbrainmuseumgmail.com

ಸಂಪರ್ಕಿಸಿ.

ಕೋಟ್

ಮಿದುಳು ಹೇಗೆ ಕಾರ್ಯನಿರ್ವಹಿಸುತ್ತದೆ, ಸಂಪರ್ಕ, ನರ ಪ್ರಚೋದನೆಗಳು ಹೇಗೆ ಚಲಿಸುತ್ತವೆ ಎಂಬುದನ್ನು ತೋರಿಸಲು ಡಿಜಿಟಲ್ ತಂತ್ರಜ್ಞಾನ ಬಳಕೆಯ ಅಗತ್ಯವಿದೆ. ಅದಕ್ಕೆ ನೂತನ ಸಂಗ್ರಹಾಲಯದ ಉತ್ತಮ ವೇದಿಕೆ ಕಲ್ಪಿಸಲಿದೆ.

- ಡಾ. ಅನಿತಾ ಮಹಾದೇವನ್, ನರರೋಗಶಾಸಜ್ಞೆ ಹಾಗೂ ಸಂಯೋಜಕಿ ಮಾನವ ಮಿದುಳು ಬ್ಯಾಂಕ್ ಮತ್ತು ವಸ್ತುಸಂಗ್ರಹಾಲಯ, ನಿಮ್ಹಾನ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net