

ತುಮಕೂರು: ಕೊಲೆಗೆ ಸಂಚು ರೂಪಿಸಿರುವ ಬಗ್ಗೆ ಶುಕ್ರವಾರ ಮಧ್ಯಾಹ್ನ 12.30ರಲ್ಲಿ ಆರ್.ರಾಜೇಂದ್ರ ಸಲ್ಲಿಸಿದ ದೂರಿನ ಹಿನ್ನೆಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಅಡಿ ಕಲಂ 109, 329 (4), 61(2), ಸೆಕ್ಷನ್ 190ರಡಿ ಸೋಮ, ಭರತ್, ಅಮಿತ್, ಗುಂಡ, ಯತೀಶ್ ಹಾಗೂ ಇತರರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಮಹಿಳೆ ಜತೆ ಹುಡಗನೊಬ್ಬ ಸಂಭಾಷಣೆ ನಡೆಸಿರುವ ಆಡಿಯೋ ರೆಕಾರ್ಡ್ನಲ್ಲಿ ಕೊಲೆಗೆ ಸಂಚು ರೂಪಿಸಿರುವುದರ ಬಗ್ಗೆ ಜನವರಿಯಲ್ಲಿ ಮಾಹಿತಿ ದೊರೆತಿದ್ದು ಈ ಸಾಕ್ಷ್ಯವನ್ನು ಪೆನ್ ಡ್ರೈವ್ ನಲ್ಲಿ ಪೊಲೀಸರಿಗೆ ರಾಜೇಂದ್ರ ನೀಡಿದ್ದಾರೆ.
ಶಿರಾಗೇಟ್ ಫಾರ್ಮ್ ಹೌಸ್ ನಲ್ಲಿ ಸಂಚು !
ಹಿರಿಯ ಮಗಳ ಜನ್ಮದಿನದ ಸಂದರ್ಭದಲ್ಲಿ ಶಾಮಿಯಾನ ಹಾಕುವ ಕಾರ್ಮಿಕರ ವೇಷಧಾರಿಯಾಗಿ ಬಂದು ಕೊಲೆಗೆ ಸಂಚು ರೂಪಿಸಿ ಅಕ್ರಮವಾಗಿ ಸುಪಾರಿ ಕಿಲ್ಲರ್ಗಳು ರಾಜೇಂದ್ರ ಮನೆ ಪ್ರವೇಶಿಸಿದ್ದರು. ಈ ಯೋಜನೆ ವಿಫಲವಾಗಿತ್ತು.
ಹಾಗಾಗಿ, ಮುಂದೊಂದು ದಿನ ಹತ್ಯೆ ಮಾಡಲು ರಾಜೇಂದ್ರ ಕಾರಿಗೆ ಜಿಪಿಎಸ್ ಸಹ ಅಳವಡಿಸಲು ಸಂಚು ರೂಪಿಸಿರುವುದು ಆಡಿಯೋ ತುಣುಕಿನಲ್ಲಿದೆ. ಬಳಿಕ ಈ ತಂಡವು ಶಿರಾ ಗೇಟ್ನ ಫಾರ್ಮ್ ಹೌಸ್ನಲ್ಲಿ ಮತ್ತೊಮ್ಮೆ ಸಂಚು ರೂಪಿಸಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಕೃತ್ಯಕ್ಕೆ ಕಾರು ಸಹ ಖರೀದಿಸಿದ್ದರು. ಬೆಂಗಳೂರಿನ ಕಲಾಸಿಪಾಳ್ಯ, ತುಮಕೂರು, ಮಧುಗಿರಿಯಲ್ಲಿ ರಾಜೇಂದ್ರ ಚಲನವಲನಗಳ ಮೇಲೆ ಕಣ್ಣಿಡಲು ಮಾಹಿತಿದಾರರನ್ನು ಸಹ ನೇಮಿಸಿಕೊಂಡಿರುವುದು ದೂರಿನಲ್ಲಿ ದಾಖಲಿಸಲಾಗಿದೆ.