

ತುಮಕೂರು: ಸಚಿವ ಕೆ.ಎನ್.ರಾಜಣ್ಣ ಪುತ್ರ ಎಂಎಲ್ಸಿ ಆರ್.ರಾಜೇಂದ್ರ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ರನ್ನು ಭೇಟಿ ಮಾಡಿ ತನ್ನ ಕೊಲೆಗೆ ಸುಪಾರಿ ನೀಡಿರುವ ಕುರಿತ ಸಾಕ್ಷ್ಯ ಒದಗಿಸುವ "ಪೆನ್ ಡ್ರೈವ್' ಸಮೇತ ಲಿಖಿತ ದೂರನ್ನು ಸಲ್ಲಿಸಿದರು. ಎಸ್ಪಿ ಸೂಚನೆಯಂತೆ ಕೊಲೆಗೆ ಯತ್ನಿಸಿದ್ದ ಘಟನೆ ನಡೆದ ಸ್ಥಳದ ವ್ಯಾಪ್ತಿಗೆ ಬರಲಿರುವ ಕ್ಯಾತಸಂದ್ರ ಠಾಣೆಗೆ ತೆರಳಿದ ರಾಜೇಂದ್ರ ಮಧ್ಯಾಹ್ನ ಠಾಣಾಧಿಕಾರಿ ಬಳಿ ದೂರು ನೀಡಿದರು.
ಡಿಜಿಪಿ ಅಲೋಕ್ ಮೋಹನ್ರನ್ನು ಬೆಂಗಳೂರಿನಲ್ಲಿ ಗುರುವಾರ ಭೇಟಿ ಮಾಡಿ ತಮ್ಮ ಕೊಲೆಗೆ ಯತ್ನಿಸಿದ್ದಾಗಿ ದೂರು ನೀಡಿದ್ದ ರಾಜೇಂದ್ರರನ್ನು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಲು ಸೂಚಿಸಿದ್ದರು. ಈ ಹಿನ್ನೆಲೆ ಶುಕ್ರವಾರ ಬೆಳಗ್ಗೆ 11.15ರ ಹೊತ್ತಿಗೆ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿಯಿತ್ತ ರಾಜೇಂದ್ರ ದೂರಿನ ಪ್ರತಿ ಜತೆ "ಪೆನ್ ಡ್ರೈವ್'ಸಹ ಸಲ್ಲಿಸಿದರು. ಈ ವೇಳೆ 30 ನಿಮಿಷಗಳಿಗು ಹೆಚ್ಚು ಕಾಲ ರಾಜೇಂದ್ರರೊಂದಿಗೆ ಎಸ್ಪಿ ಚರ್ಚೆ ನಡೆಸಿ ಸಾಕಷ್ಟು ಮಾಹಿತಿ ಪಡೆದುಕೊಂಡರು. ಅಷ್ಟರೊಳಗೆ ಕ್ಯಾತಸಂದ್ರ ಪಿಎಸ್ಐ ಚೇತನ್ ಕುಮಾರ್ರನ್ನು ಕಚೇರಿಗೆ ಕರೆಸಿಕೊಂಡರು.
ಕ್ಯಾತಸಂದ್ರ ಠಾಣೆಗೆ ದೂರು: ಘಟನೆ ನಡೆದ ಸ್ಥಳದ ವ್ಯಾಪ್ತಿಗೆ ಬರುವ ಕ್ಯಾತಸಂದ್ರ ಠಾಣೆಯಲ್ಲಿ ದೂರು ನೀಡುವಂತೆ ಎಸ್ಪಿ ಸಲಹೆ ನೀಡಿದ ಹಿನ್ನೆಲೆಯಲ್ಲಿ ಎಸ್ಪಿ ಕಚೇರಿಯಿಂದ ನೇರವಾಗಿ ಅಲ್ಲಿಗೆ ತೆರಳಿದ ರಾಜೇಂದ್ರ ದೂರು ಸಲ್ಲಿಸಿದರು. ಈ ದೂರಿನ ಹಿನ್ನೆಲೆ ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪೆನ್ ಡ್ರೈವ್ ನಲ್ಲಿ 18 ನಿಮಿಷದ ಸಂಭಾಷಣೆ !!
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ನೀಡಿದ ದೂರಿನ ಪ್ರತಿ ಜತೆಗೆ "ಪೆನ್ ಡ್ರೈವ್' ಅನ್ನು ಪರಿಷತ್ ಸದಸ್ಯ ರಾಜೇಂದ್ರ ಸಲ್ಲಿಸಿದ್ದರು. ದೂರು ನೀಡಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ "ಪೆನ್ ಡ್ರೈವ್' ರಹಸ್ಯ ಬಿಚ್ಚಿಟ್ಟಿರು. ನನ್ನ ಕೊಲೆಗೆ ಯತ್ನಿಸಿ ಸುಪಾರಿ ಕೊಟ್ಟಿರುವ ಕುರಿತು ಮಹಿಳೆ ಮತ್ತು ಹುಡಗನೊಬ್ಬನ ಜತೆಗಿನ ಸಂಭಾಷಣೆಯ 18 ನಿಮಿಷಗಳ "ಆಡಿಯೋ' ಸಾಕ್ಷ್ಯವನ್ನು ಒದಗಿಸಲಾಗಿದೆ. ಈ ಆಡಿಯೋದಲ್ಲಿ ಸೋಮ, ಭರತ ಎಂಬುವರ ಹೆಸರು ಪ್ರಸ್ತಾಪವಾಗಿದೆ. ಒಟ್ಟು 70 ಲಕ್ಷಕ್ಕೆ ನನ್ನ ಕೊಲ್ಲಲು ಸುಪಾರಿ ಕೊಟ್ಟಿದ್ದು 5 ಲಕ್ಷ ಮುಂಗಡವಾಗಿ ಅವರಿಬ್ಬರ ಖಾತೆಗು ಜಮಾ ಮಾಡಿರುವ ವಿಷಯವು ಸಂಭಾಷಣೆಯಲ್ಲಿದೆ. ನನ್ನ ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ಶಾಮಿಯಾನ ಹಾಕಲು ಬಂದಿದ್ದ ವೇಳೆ ಈ ಯತ್ನ ಮಾಡಲಾಗಿದೆ ಎಂಬುದನ್ನು ಮಾಧ್ಯಮಗಳ ಮುಂದಿಟ್ಟರು.