Murder Case ಪತ್ನಿಯನ್ನು ಕೊಂದ ಪಾಪಿ ಪತಿಗೆ ಜೀವಾವಧಿ ಶಿಕ್ಷೆ, 25 ಸಾವಿರ ರೂ. ದಂಡ

Murder Case
Published on

ಕಾರವಾರ Murder Case : ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಪಾಳಾ ಗ್ರಾಮದ ನಿವಾಸಿ ಬಸವರಾಜ ಗದಿಗೆಪ್ಪ ಮೇಲಿನಮನಿ ಶಿಕ್ಷೆಗೊಳಗಾದ ಅಪರಾಧಿ. ಪಾಳಾ ಗ್ರಾಪಂ ಸದಸ್ಯೆಯಾಗಿದ್ದ ಪತ್ನಿ ಅಕ್ಕಮ್ಮ ಬಸವರಾಜ ಮೇಲಿನಮನಿ ಎಂಬಾಕೆಯನ್ನು ಕೊಡಲಿಯಿಂದ ಹೊಡೆದು, ನಂತರ ಆಕೆಯ ಸೀರೆಯಿಂದಲೇ ಕತ್ತು ಹಿಸುಕಿ ಕೊಲೆ ಮಾಡಿದ್ದ.

ಪತ್ನಿ ಮನೆಗೆ ತಡವಾಗಿ ಬರುತ್ತಾಳೆ ಎಂದು ಬಸವರಾಜ ಆಕೆಯ ನಡತೆಯ ಮೇಲೆ ಸಂಶಯಗೊಂಡಿದ್ದ. ಗ್ರಾಪಂ ಅಧ್ಯಕ್ಷರ ಆಯ್ಕೆಯಲ್ಲಿ ತನ್ನ ಮಾತು ಕೇಳದೇ ಅನಾವಶ್ಯಕ ಹಸ್ತಕ್ಷೇಪ ಮಾಡುತ್ತಾಳೆ ಎಂದು ಪತಿ ಬಸವರಾಜ ಮೇಲಿನಮನಿ ಆಕೆಯ ಮೇಲೆ ಸಿಟ್ಟುಗೊಂಡು 2022 ಆಗಸ್ಟ್ 2 ರಂದು ಈ ಕುಕೃತ್ಯ ನಡೆಸಿದ್ದ.

ತನ್ನ ಮಕ್ಕಳು ರಾತ್ರಿ ಮನೆಗೆ ಬಂದಾಗ ಪತ್ನಿಯನ್ನು ಕೊಲೆ ಮಾಡಿರುವುದನ್ನು ಮುಚ್ಚಿಟ್ಟಿದ್ದ. ಅವರು ಊಟ ಮಾಡಿ ಮಲಗುತ್ತಿದ್ದಂತೆ ಶವವನ್ನು ಹೊರಗೆ ಎಳೆತಂದು ಮಲಗಿಸಿ ಅಕ್ಕಮ್ಮ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದ.

Murder Case

ಪ್ರಕರಣ ದಾಖಲಿಸಿಕೊಂಡ ಆಗಿನ ಮುಂಡಗೋಡ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ಅವರು ಕೊಲೆಗಾರ ಬಸವರಾಜ ಗದಿಗೆಪ್ಪ ಮೇಲಿನಮನಿಯನ್ನು ಬಂಧಿಸಿ, ತನಿಖೆ ನಡೆಸಿದ್ದರು. ನಂತರ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಶಿರಸಿ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗೀಕರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ನಂತರ ಮುಂಡಗೋಡ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಕರಿಬಸಪ್ಪ ಇಂಗಳಸೂರು ಹಾಗೂ ತಿರುಪತಿ ಚೌಡಣ್ಣವರ್ ಸಾಕ್ಷಿಗಳನ್ನು ಹಾಜರುಪಡಿಸುವಲ್ಲಿ ಶ್ರಮ ವಹಿಸಿದ್ದರು.

ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಶಿರಸಿ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಅಪರಾಧಿಗೆ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಅಲ್ಲದೇ ಮೃತಳ ಅವಲಂಬಿತ ಮಕ್ಕಳಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net