ಹಲ್ಲೆ ನಡೆಸಿ ಪ್ರೇಯಸಿ ಹತ್ಯೆ ಯತ್ನ: ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

Murder attmept 27 APR 20
Published on

ಬೆಂಗಳೂರು: ಪ್ರೀತಿಸುವ ಸೋಗಿನಲ್ಲಿ ಯುವತಿಯನ್ನು ಬಲೆಗೆ ಬೀಳಿಸಿಕೊಂಡಿದ್ದ ವ್ಯಕ್ತಿ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ನಂತರ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿದ್ದಾನೆ.

ಮಾರತ್ತಹಳ್ಳಿ ನಿವಾಸಿ 29 ವರ್ಷದ ಯುವತಿ ಸಂತ್ರಸ್ತೆ. ಈ ಕುರಿತು ಆಕೆ ಕೊಟ್ಟ ದೂರಿನ ಅನ್ವಯ ಸಂಜಯ ಗರ ನಿವಾಸಿ ಅರ್ಕ್ ಬಕ್ಷಿ ಎಂಬಾತನ ವಿರುದ್ಧ ಅತ್ಯಾಚಾರ, ಕೊಲೆಯತ್ನ ಪ್ರಕರಣ ದಾಖಲಿ ಸಲಾಗಿದೆ ಎಂದು ಮಾರತ್ತಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಮಾರತ್ತಹಳ್ಳಿಯಲ್ಲಿ ನೆಲೆಸಿದ್ದ ಯುವತಿ, ತನ್ನ ಮನೆ ಸಮೀಪದ ಎನ್​ಜಿಒದಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಬಕ್ಷಿ ಪರಿಚಯವಾಗಿದ್ದ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಸುತ್ತಿದ್ದ ವಿಚಾರವನ್ನು ಯುವತಿಯ ಪಾಲಕರಿಗೆ ತಿಳಿಸಿ ಮದುವೆಯಾಗುವುದಾಗಿ ಹೇಳಿದ್ದ.

ಉಂಗುರ ತೊಡಿಸಿದ್ದ!: ಆತ ಕೆಲಸ ಮಾಡá-ತ್ತಿದ್ದ ಕಚೇರಿ ಸಂಜಯನಗರಕ್ಕೆ ಸ್ಥಳಾಂತರವಾಗಿತ್ತು. ಈ ಹಿನ್ನೆಲೆಯಲ್ಲಿ ಬಕ್ಷಿ ಕೂಡ ಸಂಜಯನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಫೆ.14ರಂದು (ಪ್ರೇಮಿಗಳ ದಿನ) ಕಾಡುಬೀಸನಹಳ್ಳಿಯಲ್ಲಿರುವ ಪಬ್​ಗೆ ಕರೆದೊಯ್ದಿದ್ದ. ಈ ವೇಳೆ ಸ್ನೇಹಿತರಿಗೆ ಯುವತಿಯನ್ನು ಪರಿಚಯಿಸಿದ್ದ. ಅಲ್ಲದೇ, ಸ್ನೇಹಿತರ ಮುಂದೆ ಮದುವೆಯಾಗುವುದಾಗಿ ಹೇಳಿ ಕೈ ಬೆರಳಿಗೆ ಉಂಗುರ ತೊಡಿಸಿದ್ದ.

ಆರೋಪಿ ಪಾಲಕರಿಂದ ಬೆದರಿಕೆ: ‘ಇಬ್ಬರೂ ಸಂಜಯನಗರದ ಕಚೇರಿಯಲ್ಲೇ ಕೆಲಸ ಮಾಡೋಣ’ ಎಂದು ಪುಸಲಾಯಿಸಿ ನನ್ನನ್ನು ಮಾರತ್​ಹಳ್ಳಿಯಿಂದ ಸಂಜಯನಗರದ ಆತನ ಮನೆಗೆ ಕರೆಸಿಕೊಂಡಿದ್ದ. ಅಲ್ಲಿ ಇಬ್ಬರೂ ಒಟ್ಟಾಗಿ ವಾಸಿಸುತ್ತಿದ್ದೆವು. ಈ ವಿಚಾರ ಬಕ್ಷಿಯ ತಂದೆ ತಾಯಿಗೆ ಗೊತ್ತಾಗಿತ್ತು. ‘ಪುತ್ರನ ಜತೆಗಿನ ಸಂಬಂಧ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ನನಗೆ ಅವರು ಬೆದರಿಕೆ ಸಂದೇಶ ಕಳುಹಿಸಿದ್ದರು. ಅಲ್ಲದೆ, ಬಕ್ಷಿಗೆ ಕರೆ ಮಾಡಿ, ‘ಯುವತಿ ಜತೆಗಿನ ಸಂಬಂಧ ಬಿಟ್ಟುಬಿಡು. ಇಲ್ಲವಾದರೆ ನಿನ್ನನ್ನು ಮನೆಯಿಂದ ಹೊರಹಾಕುತ್ತೇವೆ’ ಎಂದು ಬೆದರಿಸಿದ್ದರು. ಅದರಿಂದಾಗಿ ಅರ್ಕ್ ಬಕ್ಷಿ ಮಾ.23ರಂದು ಮನೆ ಬಿಟ್ಟು ಹೋಗುವಂತೆ ನನ್ನೊಂದಿಗೆ ಗಲಾಟೆ ತೆಗೆದಿದ್ದ. ಅದಕ್ಕೆ ನಿರಾಕರಿಸಿದಾಗ ಹಲ್ಲೆ ನಡೆಸಿ, ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ನನ್ನನ್ನು ರಕ್ಷಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net