ಕೊಲೆ ಪ್ರಕರಣ ಆರೋಪಿ ಬಂಧನ

arrested
Published on

ಕಾಸರಗೋಡು: ಸೀತಾಂಗೋಳಿ ಸನಿಹದ ಮುಗು ರಸ್ತೆ ನಿವಾಸಿ, ವಿದೇಶದಲ್ಲಿ ಉದ್ಯೋಗಿಯಾಗಿದ್ದ ಅಬೂಬಕ್ಕರ್ ಸಿದ್ದೀಕ್ ಕೊಲೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಮಂಜೇಶ್ವರ ಆಚೆಕೆರೆ ನಿವಾಸಿ ಅಶರ್ ಅಲಿ ಎಂಬಾತನನ್ನು ಕಾಸರಗೋಡು ಕ್ರೈಂ ಬ್ರಾಂಚ್ ಡಿವೈಎಸ್‌ಪಿ ಪಿ.ಮಧುಸೂಧನನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ವಿದೇಶದಲ್ಲಿದ್ದ ಆತ ಊರಿಗೆ ವಾಪಸಾಗುವ ಸಂದರ್ಭ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆತನನ್ನು ಬಂಧಿಸಲಾಗಿದೆ. ಆತ ಪ್ರಕರಣದ ಹತ್ತನೇ ಆರೋಪಿಯಾಗಿದ್ದಾನೆ. ವಿದೇಶದಲ್ಲಿದ್ದ ಅಬೂಬಕ್ಕರ್ ಸಿದ್ದೀಕ್ ಅವರನ್ನು ಊರಿಗೆ ಕರೆಸಿಕೊಂಡಿದ್ದ ತಂಡ, 2022ರ ಜೂನ್ 26ರಂದು ಕಾರಿನಲ್ಲಿ ಅಪಹರಿಸಿ ಪೈವಳಿಕೆಯ ಜನವಾಸವಿಲ್ಲದ ಸ್ಥಳಕ್ಕೆ ಕರೆದೊಯ್ದು ಥಳಿಸಿ, ಕೊಲೆಗೈದು ಬಂದ್ಯೋಡಿನ ಖಾಸಗಿ ಆಸ್ಪತ್ರೆ ಸನಿಹ ಮೃತದೇಹ ಎಸೆದು ಪರಾರಿಯಾಗಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ 13 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಐವರನ್ನು ಬಂಧಿಸಬೇಕಾಗಿದೆ. ವಿದೇಶದಿಂದ ವ್ಯಕ್ತಿಯೊಬ್ಬರಿಗೆ ಹಸ್ತಾಂತರಿಸಲು ನೀಡಿದ್ದ 30 ಲಕ್ಷ ರೂ. ಮೊತ್ತದ ಹಣದ ವಿಚಾರಕ್ಕೆ ಸಂಬಂಧಿಸಿ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net