

ಮಕ್ತಂಪುರದಲ್ಲಿ ಟೈಲರ್ ಮರ್ಡರ್ ಪ್ರಕರಣ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗದ ಮಕ್ತಂಪುರ ಬಡಾವಣೆಯಲ್ಲಿ ಬುಧವಾರ ಸಂಜೆ ಬಿಎಸ್ ಟೈಲರ್ ಮಾಲೀಕ ಸುರೇಶ ಹಂಚೆ ಎಂಬುವರನ್ನು ಭೀಕರವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿತನನ್ನು ಬ್ರಹ್ಮಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಘಟನೆ ನಡೆದ ೨೦ ಗಂಟೆಯೊಳಗೆ ಕೊಲೆಗಾರನನ್ನು ಬಂಧಿಸಿದಂತಾಗಿದೆ..
ಅವಿನಾಶ ಶರಣಯ್ಯ ಹಿರೇಮಠ (೨೨) ಎಂಬಾತನೇ ಬಂಧಿತ.
ಸೂಪರ್ ಮಾರ್ಕೇಟ್‌ನ ಪುಠಾಣಿ ಗಲ್ಲಿಯಲ್ಲಿ ಬಿಎಸ್ ಟೈಲರ್ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಸುರೇಶ ಅವರ ಬಳಿಯಲ್ಲಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಅವಿನಾಶ ಕೆಲಸ ಮಾಡುತ್ತಿದ್ದ. ಅಲ್ಲದೆ ಮಕ್ತಂಪುರದಲ್ಲಿರುವ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ.
ಪಗಾರ ಹೆಚ್ಚಳ ಮಾಡುವಂತೆ ಮೇಲಿಂದ ಮೇಲೆ ಪೀಡಿಸಿದ ಕಾರಣಕ್ಕೆ ಆತನನ್ನು ಕೆಲಸದಿಂದ ಬಿಡಿಸಿದ್ದರು. ಬಳಿಕ ಅವರ ಮನೆಯನ್ನು ಬಿಟ್ಟು, ಸಮೀಪದಲ್ಲಿಯೇ ಮತ್ತೊಂದು ಬಾಡಿಗೆ ಮನೆ ಮಾಡಿಕೊಂಡಿದ್ದ. ಅದೇ ಕಾರಣಕ್ಕೆ ಆಗಾಗ ಅವರೊಂದಿಗೆ ಜಗಳವಾಡುತ್ತಿದ್ದ. ಅದನ್ನೇ ವೈಷಮ್ಯ ಸಾಧಿಸಿ ಈ ಕೃತ್ಯ ನಡೆಸಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಪೊಲೀಸ್ ಆಯುಕ್ತ ಆರ್.ಚೇತನ, ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಎಸಿಪಿ ಭೂತೇಗೌಡ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಸೋಮಶೇಖರ ಕಿರದಳ್ಳಿ ನೇತೃತ್ವದಲ್ಲಿ ಶಿವಪ್ರಕಾಶ, ರಾಮು ಪವಾರ, ಶಿವಶರಣಪ್ಪ,ನವೀನಕುಮಾರ ಕೂಡಿಕೊಂಡು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.