

ಕನಕಪುರ : ಗ್ರಾಮಾಂತರ ಠಾಣಾ ವ್ಯಾಪ್ತಿಯ ಚೌಕಸಂದ್ರ ಗ್ರಾಮದಲ್ಲಿ ಬುಧವಾರ ಸಾಲ ವಾಪಸ್ ಕೊಡುವುದಾಗಿ ಕರೆಯಿಸಿಕೊಂಡು ಮಹಿಳೆಯನ್ನು ಕೊಲೆ ಮಾಡಿ ಜಮೀನಿನಲ್ಲಿ ಹೂತುಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಟಿ. ಗೊಲ್ಲಹಳ್ಳಿಯ ಸುನಂದಮ್ಮ (65) ಮೃತೆ. ಸುನಂದಮ್ಮ ಸಂಬಂಧಿಗಳು ಎನ್ನಲಾದ ತಾಲೂಕಿನ ಶ್ರೀನಿವಾಸನಹಳ್ಳಿ ರವಿಕುಮಾರ್ ಹಾಗೂ ಪತ್ನಿ ಆಶಾ ಎಂಬುವವರಿಂದ ಹತ್ಯೆಯಾಗಿದೆ ಎಂದು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮೂಲತಃ ಶ್ರೀನಿವಾಸನಹಳ್ಳಿಯ ದಂಪತಿ ಚೌಕಸಂದ್ರ ತಾಂಡ್ಯ ಸಮೀಪದ ರೈತರೊಬ್ಬರ ರೇಷ್ಮೆತೋಟ ಗುತ್ತಿಗೆ ಪಡೆದಿದ್ದು ಐದು ತಿಂಗಳಿನಿಂದ ತೋಟದ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಇದಕ್ಕೂ ಮೊದಲು ಸಂಬಂಧಿ ಸುನಂದಮ್ಮ ಅವರಿಂದ ₹ 20 ಸಾವಿರ ಸಾಲ ಪಡೆದಿದ್ದರು. ಆದರೆ, ವರ್ಷ ಕಳೆದರೂ ವಾಪಸ್ ನೀಡಿರಲಿಲ್ಲ. ಈ ಸಂಬಂಧ ಸಾಲ ಮರುಪಾವತಿಸುವಂತೆ ಸುನಂದಮ್ಮ ಕೇಳಿದ್ದರು. ಮಂಗಳವಾರ ಬೆಳಗ್ಗೆ ರವಿಕುಮಾರ್, ಸುನಂದಮ್ಮನಿಗೆ ಕರೆ ಮಾಡಿ ಹಣ ವಾಪಸ್ ನೀಡುವುದಾಗಿ ಕೋಡಿಹಳ್ಳಿಯ ತೋಟದ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ. ಬುಧವಾರ ಬೆಳಗಿನ ಜಾವ ಚೌಕಸಂದ್ರದಿಂದ ಹಾರೆ-ಸಲಿಕೆ ತೆಗೆದುಕೊಂಡು ಬಂದು ರೇಷ್ಮೆ ತೋಟದಲ್ಲಿಯೇ ಗುಂಡಿ ತೆಗೆದು ಮುಚ್ಚಿದ್ದಾರೆ.
ಸುನಂದಮ್ಮ ಮನೆಗೆ ಹಿಂದಿರುಗದ ಕಾರಣ ಕುಟುಂಬಸ್ಥರು ಎಲ್ಲೆಡೆ ಹುಡುಕಿದ್ದಾರೆ. ಯಾವುದೇ ಮಾಹಿತಿ ಸಿಗದ ಕಾರಣ ದೂರವಾಣಿ ಕರೆ ಮಾಡಿದ್ದ ಆರೋಪಿ ಮನೆಗೆ ಬಂದು ಪರಿಶೀಲಿಸಿದ್ದಾರೆ. ಸುನಂದಮ್ಮಅಲ್ಲಿಯೂ ಕಾಣದಿದ್ದಾಗ ಆತಂಕಗೊಂಡ ಕುಟುಂಬದವರಿಗೆ ಗ್ರಾಮಸ್ಥರು ಹಾರೆ ಸಲಿಕೆ ತೆಗೆದುಕೊಂಡು ತೋಟಕ್ಕೆ ಹೋಗಿದ್ದಾರೆಂಬ ಸುದ್ದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೋಟ ಶೋಧಿಸಿದಾಗ ಗುಂಡಿ ತೆಗೆದು ಮುಚ್ಚುವ ವೇಳೆ ಮಹಿಳೆಯ ಕೂದಲು ಹೊರ ಕಾಣುತ್ತಿದ್ದರಿಂದ ಕೂಡಲೇ ಗ್ರಾಮಾಂತರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್, ಡಿವೈಎಸ್‌ಪಿ ಗಿರೀಶ್, ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಲ್.ಕೃಷ್ಣ, ಎಸ್‌ಐ ಹೇಮಂತ್, ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಮಹಜರು ನಂತರ ಶವ ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.